

ಹಾಸನ: ಪದವಿ ಕಾಲೇಜುಗಳ ಉಪನ್ಯಾಸಕರ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಎಸ್‌ಎಫ್‌ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆಸಿದರು.
ನಗರದ ಗಂಧದ ಕೋಠಿ ಆವರಣದಿಂದ ಹೊರಟ ಪ್ರತಿಭಟನಾಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ರಮೇಶ್ ಮಾತನಾಡಿ, ರಾಜ್ಯದಲ್ಲಿ ಶೈಕ್ಷಣಿಕ ವರ್ಷ ಪ್ರಾರಂಭವಾಗಿ 2 ತಿಂಗಳು ಕಳೆದಿದೆ. ರಾಜ್ಯದಲ್ಲಿರುವ ಬಹುತೇಕ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಶೇ.70ಕ್ಕಿಂತ ಹೆಚ್ಚು ಅತಿಥಿ ಉಪನ್ಯಾಸಕರು ಸರ್ಕಾರಿ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಕಾಲೇಜುಗಳು ಪ್ರಾರಂಭವಾಗಿ 2 ತಿಂಗಳು ಕಳೆದರೂ ಅತಿಥಿ ಉಪನ್ಯಾಸಕರ ನೇಮಕಾತಿಯಾಗಿಲ್ಲ ಎಂದರು.
ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಶೈಕ್ಷಣಿಕ ಸಾಲಿನಲ್ಲಿ ಯುಜಿಸಿ ಮತ್ತು ನಾನ್ ಯುಜಿಸಿ ಎಂಬ ಗೊಂದಲದಿಂದಾಗಿ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆ ಸ್ಥಗಿತಗೊಂಡಿದೆ ಎಂದು ದೂರಿದರು. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗಿದೆ ಹಾಗೂ ವಿದ್ಯಾರ್ಥಿಗಳ ಬದುಕು ಅತಂತ್ರ ಸ್ಥಿತಿಯಂತಾಗಿದೆ. ಹೆಚ್ಚಾಗಿ ಸರ್ಕಾರಿ ಕಾಲೇಜುಗಳಲ್ಲಿ, ಬಡ ವಿದ್ಯಾರ್ಥಿಗಳು ಹೆಚ್ಚು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಕಾಲೇಜು ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡುವ ಮೂಲಕ ಆತಿಥಿ ಉಪನ್ಯಾಸಕರ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಮುಂದಿನ ದಿನಗಳಲ್ಲಿ ಸರ್ಕಾರ ಸಮಸ್ಯೆಗಳನ್ನು ಬಗೆಹರಿಸದೆ ಇದ್ದಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಡಿವೈಎಫ್‌ಐ ಮುಖಂಡ ಎಂ.ಜಿ.ಪೃಥ್ವಿ, ಕಾರ್ಯದರ್ಶಿ ವಿವೇಕ್, ಛಾಯಾ, ವಿಕ್ಕಿ, ರಂಗ ಅಫ್ತಾಬ್ ಇತರರು ಇದ್ದರು.