ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ

ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ
Published on

ಸೋಮವಾರಪೇಟೆ: ವಿವಿಧ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿ ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ವತಿಯಿಂದ ಕಂದಾಯ, ಪಟ್ಟಣ ಪಂಚಾಯಿತಿ ಹಾಗು ಪೊಲೀಸ್ ಇಲಾಖೆಗೆ ತೆರಳಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸೋಮವಾರ ಮನವಿ ಸಲ್ಲಿಸಲಾಯಿತು.

ತಾಲೂಕಿನ ಕಂದಾಯ ಗ್ರಾಮಗಳ ವಿಸ್ತೀರ್ಣ, ಗ್ರಾೃಂಟ್, ದುರಸ್ತಿಯಾಗಿರುವ ಜಾಗ, ಖಾಲಿಯಿರುವ ಜಾಗದ ವಿಸ್ತೀರ್ಣವನ್ನು ಏಕರೆಯಲ್ಲಿ ನೀಡಬೇಕೆಂದು ಮನವಿ ಸಲ್ಲಿಸಲಾಗಿತ್ತು. ಆದರೆ, ಇದುವರೆಗೆ ಯಾವುದೇ ಕೆಲಸವಾಗಿಲ್ಲ ಎಂದು ಶಿರೇಸ್ತೇದಾರ್ ರಮೇಶ್ ಅವರನ್ನು ಸಮಿತಿ ಅಧ್ಯಕ್ಷ ಡಿ.ಕೆ.ಅರುಣ್ ಕುಮಾರ್ ತರಾಟೆಗೆ ತೆಗೆದುಕೊಂಡರು.

ಸರ್ವೆ ಇಲಾಖೆ, ಕಂದಾಯ ಇಲಾಖೆಯಲ್ಲಿ ರೈತರ ಶೋಷಣೆ ನಡೆಯುತ್ತಿದೆ. ಇದು ಮುಂದುವರಿದು ರೈತರ ಕೋಪಕ್ಕೆ ತುತ್ತಾದರೆ ಪರಿಣಾಮ ಬೇರೆ ತರ ಇರುತ್ತದೆ. ಲಂಚಕ್ಕಾಗಿ ಕಿರುಕುಳ ನೀಡಿದರೆ ಸಹಿಸಲು ಸಾಧ್ಯವಿಲ್ಲ. ಈ ವಿಷಯವನ್ನು ಅಧಿಕಾರಿಗಳು ಮನದಟ್ಟು ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದರು.
ಸಾರ್ವಜನಿಕರಿಗೆ ಕಚೇರಿಯಲ್ಲಿ ಅಧಿಕಾರಿಗಳು ಸಿಗಬೇಕು. ನಿಗದಿತ ಸಮಯದಲ್ಲಿ ಕೆಲಸ ಮಾಡಿಕೊಡಬೇಕು. ಸಿ.ಸಿ.ಕ್ಯಾಮರಾ ಕಣ್ಗಾವಲಿನಲ್ಲಿ ಕೆಲಸ ಕಾರ್ಯಗಳು ನಡೆಯಬೇಕು. ಬಯೋಮೆಟ್ರಿಕ್ ವ್ಯವಸ್ಥೆ ಕಡ್ಡಾಯವಾಗಬೇಕು. ಮುಂದಿನ ದಿನಗಳಲ್ಲಿ ಕಂದಾಯ ಇಲಾಖೆಯ ಸಮಸ್ಯೆಗಳು ಬಗೆಹರಿಯದಿದ್ದರೆ ತಾಲೂಕು ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅರುಣ್ ಕುಮಾರ್ ಎಚ್ಚರಿಸಿದರು.

ಪೊಲೀಸ್ ಠಾಣೆಗೆ ತೆರಳಿದ ಸಮಿತಿ ಪದಾಧಿಕಾರಿಗಳು ಟ್ರಾಫಿಕ್ ಸಮಸ್ಯೆ ಬಗ್ಗೆ ಠಾಣಾಧಿಕಾರಿಗಳಾದ ರಮೇಶ್ ಕುಮಾರ್, ಪ್ರಹ್ಲಾದ್ ಅವರೊಂದಿಗೆ ಚರ್ಚಿಸಿದರು.

ಹಿಂದೆಲ್ಲಾ ಟ್ರಾಫಿಕ್ ವ್ಯವಸ್ಥೆ ಸರಿಯಿತ್ತು. ಇತ್ತೀಚಿನ ದಿನಗಳಲ್ಲಿ ವ್ಯವಸ್ಥೆ ಹಾಳಾಗಿದೆ. ಎಲ್ಲೆಂದರಲ್ಲೇ ವಾಹನಗಳು ನಿಂತಿರುತ್ತವೆ. ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸಲಾಗುತ್ತಿದೆ. ಸಾರ್ವಜಿನಿಕ ಸ್ಥಳದಲ್ಲಿ ಧೂಮಪಾನ ಮುಂದುವರಿದಿದೆ. ಬೈಕ್ ವ್ಹೀಲಿಂಗ್ ಮಾಡುವವರು ಕಾಣ ಸಿಗುತ್ತಿದ್ದಾರೆ ಎಂಬ ದೂರಿನ ಸುರಿಮಳೆಗೈದರು.

ಚುನಾವಣಾ ಸಮಯದಲ್ಲಿ ಪೊಲೀಸ್ ಸಿಬ್ಬಂದಿಗಳು ಬೇರೆ ಜಿಲ್ಲೆಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳುವುದಾಗಿ ಠಾಣಾಧಿಕಾರಿ ರಮೇಶ್ ಕುಮಾರ್ ಭರವಸೆ ನೀಡಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕ್ಯಾನಾಯಕ್ ಅವರೊಂದಿಗೆ ಟ್ರಾಫಿಕ್ ಸಮಸ್ಯೆ ಬಗ್ಗೆ ಚರ್ಚಿಸಿದರು. ಶೌಚಗೃಹ ಸರಿಪಡಿಸುವಂತೆ ಆಗ್ರಹಿಸಿದರು. ತಾಲೂಕು ಕಚೇರಿಯ ಮುಂಭಾಗದ ರಸ್ತೆ ಬದಿಯಲ್ಲಿ ಮಣ್ಣು ಸುರಿದಿರುವುದರಿಂದ ವಾಹನ ನಿಲ್ಲಿಸಲು ಸಮಸ್ಯೆಯಾಗಿದೆ. ಅದನ್ನು ಕೂಡಲೆ ತೆರವುಗೊಳಿಸುವಂತೆ ಆಗ್ರಹಿಸಿದರು.

ಈ ಸಂದರ್ಭ ಸಮಿತಿ ಉಪಾಧ್ಯಕ್ಷ ಕೆ.ಎನ್.ದೀಪಕ್, ಪದಾಧಿಕಾರಿಗಳಾದ ಎಚ್.ಕೆ.ತ್ರಿಶೂಲ್, ಕೆ.ಎ.ಪ್ರಕಾಶ್, ಜಿ.ಎಂ.ಹೂವಯ್ಯ, ಆದರ್ಶ್, ಸಂದೀಪ್, ರಕ್ಷಿತ್, ಭರತ್, ಗೌತಮ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net