ವಾರದೊಳಗೆ ಜನರ ಸಮಸ್ಯೆ ಬಗೆಹರಿಸಿ

03-kkr1(9-25
Published on

ಕಿಕ್ಕೇರಿ: ಸಾರ್ವಜನಿಕರ ಸಮಸ್ಯೆಗಳನ್ನು ಖುದ್ದು ಆಲಿಸಿ, ದೂರದ ಊರಿನ ಜನರು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಕುಂದುಕೊರತೆ ಸಭೆ ಆಯೋಜಿಸಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ ತಿಳಿಸಿದರು.

ಇಲ್ಲಿನ ಕೆ.ಎಸ್.ನರಸಿಂಹಸ್ವಾಮಿ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಹೋಬಳಿ ಮಟ್ಟದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು.

ಪ್ರತಿ ಸೋಮವಾರ ಗ್ರಾಪಂ, ತಾಪಂ, ಜಿಪಂ ಕಚೇರಿಗಳಲ್ಲಿ ಸಾರ್ವಜನಿಕರ ಕುಂದುಕೊರತೆ ಸಮಸ್ಯೆ ಆಲಿಸಿ ನಿಯಮಾನುಸಾರ, ಆದ್ಯತೆ ಮೇರೆಗೆ ಪರಿಹರಿಸಲು ಮುಂದಾಗಬೇಕು ಎಂದರು.

ಜಿಲ್ಲೆಯ ಕುರಿತು ವಿಶೇಷ ಅಭಿಮಾನ, ಪ್ರೀತಿ ತನಗಿದೆ. ತನ್ನ ಅವಧಿಯಲ್ಲಿ ನೊಂದವರ, ದುರ್ಬಲರ ಸಮಸ್ಯೆಗೆ ಮೊದಲ ಆದ್ಯತೆ ನೀಡುವೆ. ಸಿಇಒ ಹುದ್ದೆ ತೃಪ್ತಿ ನೀಡಿದೆ. ಸಭೆಯಲ್ಲಿ 24 ಅರ್ಜಿಗಳು ಬಂದಿದ್ದು, ಒಂದು ವಾರದೊಳಗೆ ಅಧಿಕಾರಿಗಳು ತೆಗೆದುಕೊಂಡಿರುವ ಕ್ರಮಗಳನ್ನು ತಿಳಿಸಬೇಕು ಎಂದರು.

ಕಿಕ್ಕೇರಿ ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಅವರು ಹುಟ್ಟಿದ ಊರು. ನಾನು ಕೂಡ ಅವರ ಅಭಿಮಾನಿ. ಇಲ್ಲಿನ ಕೆ.ಎಸ್.ನರಸಿಂಹಸ್ವಾಮಿ ಸಮುದಾಯ ಭವನ ತ್ವರಿತವಾಗಿ ಸಾರ್ವಜನಿಕರ ಕಾರ್ಯಕ್ರಮಗಳಿಗೆ ಅನುಕೂಲವಾಗಲು ವ್ಯವಸ್ಥೆ ಮಾಡಲು ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕ್ರಮವಹಿಸಬೇಕು ಎಂದರು.

ಕಿಕ್ಕೇರಿಯಲ್ಲಿ ರಾಜ್ಯ ಹೆದ್ದಾರಿ ಬಳಿ ತ್ಯಾಜ್ಯ ಸುರಿಯುತ್ತಿದ್ದು, ಸಾಂಕ್ರಾಮಿಕ ರೋಗ, ನಾಯಿಗಳ ಕಾಟ ವಿಪರೀತವಾಗಿದೆ. ಗೂಬೆಗುಡ್ಡದ ಬಳಿ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸಿ ಕೊಡಿ. ಸಾರ್ವಜನಿಕ ಸ್ಮಶಾನ ವ್ಯವಸ್ಥೆ, ಮಿನಿ ವಿಧಾನಸೌಧ, ಉದ್ಯಾನವನ, ಸಮುದಾಯ ಆರೋಗ್ಯ ಕೇಂದ್ರಕ್ಕೆ ವೈದ್ಯರ ವ್ಯವಸ್ಥೆ ಮಾಡಿ, ಕಿಕ್ಕೇರಿ ಪೌರಕಾರ್ಮಿಕರು ಸ.ನಂ.3ರಲ್ಲಿ ಮನೆ ನಿರ್ಮಿಸಿಕೊಂಡಿದ್ದು ಹಕ್ಕು ಪತ್ರ ಕೊಡಿ, ಲಕ್ಷ್ಮೀಪುರ ಗ್ರಾಮಕ್ಕೆ ಓವರ್‌ಹೆಡ್ ನೀರಿನ ಟ್ಯಾಂಕ್ ನಿರ್ಮಿಸಿ, ರಸ್ತೆಗಳಲ್ಲಿ ಬೀದಿ ದೀಪ ಇಲ್ಲವಾಗಿದೆ. ಆಶ್ರಯ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿರುವವರಿಗೆ ನಿವೇಶನ ನೀಡಿ, ಆಶ್ರಯ ಯೋಜನೆಯಡಿ ಮನೆ ಹಂಚಿಕೆ ಆಗಿದೆ ಆದರೆ ಹಕ್ಕುಪತ್ರ ನೀಡಿಲ್ಲ, ಊಗಿನಹಳ್ಳಿ ಗ್ರಾಮದಲ್ಲಿ ಗಿಡ ನೆಡದೆ ನರೇಗಾ ಯೋಜನೆಯಲ್ಲಿ ಬಿಲ್ ಮಾಡಿಕೊಳ್ಳಲಾಗಿದೆ ಎಂದು ಸಿಇಒ ಮುಂದೆ ಸಾರ್ವಜನಿಕರು ದೂರಿದರು.

ಜಿ.ಪಂ.ಉಪಕಾರ್ಯದರ್ಶಿ ಲಕ್ಷ್ಮೀ, ಸಹಾಯಕ ಸಾಂಖ್ಯಿಕ ಅಧಿಕಾರಿ ಅನಿತಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುಷ್ಮಾ, ಹೋಬಳಿಯ 7 ಗ್ರಾಪಂ.ಗಳ ಅಧ್ಯಕ್ಷರು, ಸದಸ್ಯರು, ಪಿಡಿಒ, ತಾಪಂ, ಪಂಚಾಯಿತಿ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net