ಜನರ ಸಮಸ್ಯೆಗಳನ್ನು ಶೀಘ್ರ ಪರಿಹರಿಸಿ

ಜನರ ಸಮಸ್ಯೆಗಳನ್ನು ಶೀಘ್ರ ಪರಿಹರಿಸಿ
Published on

ಹಾಸನ: ಸಾರ್ವಜನಿಕರ ಸಮಸ್ಯೆಗಳನ್ನು ಸೂಕ್ತ ಸಮಯದಲ್ಲಿ ನ್ಯಾಯಸಮ್ಮತವಾಗಿ ಕಾನೂನು ಚೌಕಟ್ಟಿನಲ್ಲಿ ಪರಿಹರಿಸಲು ಕ್ರಮವಹಿಸುವಂತೆ ಕಂದಾಯ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ಜನಸ್ಪಂದನಾ ಹಾಗೂ ಸಾರ್ವಜನಿಕರಿಂದ ಕುಂದು ಕೊರತೆಗಳ ಅಹವಾಲು ಸ್ವೀಕಾರ ಮಾಡಿ ಮಾತನಾಡಿ, ಸಾರ್ವಜನಿಕರ ಕೆಲಸಗಳನ್ನು ಮಾಡಲು ಸಾಧ್ಯವಿದ್ದರೆ ತಕ್ಷಣ ಮಾಡಿಕೊಡಿ, ಮಾಡಲು ಸಾಧ್ಯವಿಲ್ಲದಿದ್ದರೆ ಸ್ಪಷ್ಟವಾಗಿ ಯಾವ ಕಾರಣಕ್ಕೆ ಆಗುವುದಿಲ್ಲ ಎಂಬುದನ್ನು ಬರವಣಿಗೆಯಲ್ಲಿ ನೀಡುವಂತೆ ತಿಳಿಸಿದರು.

ಈ ಕಾರ್ಯಕ್ರಮಕ್ಕೆ ನಿಜವಾದ ಅರ್ಥ ಬರಬೇಕು ಎಂದರೆ ಇಂದು ಸ್ವೀಕರಿಸಿದ ಅರ್ಜಿಗಳನ್ನು ಫಾಲೋ ಆಫ್ ಮಾಡಿ ಸಮಸ್ಯೆ ಪರಿಹಾರಕ್ಕೆ ಪ್ರಮಾಣಿಕ ಪ್ರಯತ್ನ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನೀವು ಮಾಡುತ್ತೀರಾ ಎಂಬ ನಂಬಿಕೆ ಇದೆ ಎಂದರಲ್ಲದೆ, ಮಾಡಬೇಕು ಎಂದು ತಾಕೀತು ಮಾಡುತ್ತೇನೆ ಎಂದರು.

ಜನಸ್ಪಂದನ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಜನರು ಭಾಗವಹಿಸಿದ್ದಾರೆ. 723 ಅರ್ಜಿಗಳು ಐಪಿಜಿಆರ್‌ಎಸ್‌ನಲ್ಲಿ ನೋಂದಣಿಯಾಗಿ ಒಟ್ಟು ಒಂದು ಸಾವಿರಕ್ಕಿಂತ ಹೆಚ್ಚಿನ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅರ್ಜಿಗಳನ್ನು ಒಂದು ತಿಂಗಳ ಒಳಗೆ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜನಸ್ಪಂದನ ಕಾರ್ಯಕ್ರಮವನ್ನು 3 ತಿಂಗಳಿಗೊಮ್ಮೆ ಬೇರೆ ತಾಲೂಕು ಮಟ್ಟದಲ್ಲಿಯೂ ಆಯೋಜನೆ ಮಾಡುವ ಮೂಲಕ ಮುಂದುವರಿಸಲಾಗುವುದು ಎಂದು ತಿಳಿಸಿದ ಸಚಿವರು, ಮುಂದಿನ 10 ದಿನಗಳಲ್ಲಿ ಜಿಲ್ಲೆಯಲ್ಲಿ ಕೆ.ಡಿ.ಪಿ. ಸಭೆ ನಡೆಸಿ ಸಭೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಸ್ವೀಕೃತವಾದ ಅರ್ಜಿಗಳಲ್ಲಿ ಬಹುತೇಕ ಅರ್ಜಿಗಳು ಕಂದಾಯ ಇಲಾಖೆಗೆ ಸಂಬಂಧಿಸಿವೆ. ಅದರಲ್ಲಿ ಶೇ.50 ರಷ್ಟು ಹೇಮಾವತಿ ಜಲಾಶಯ ಯೋಜನೆಗೆ ಸಂಬಂಧಿಸಿದೆ. ನಕಾಶೆಯಲ್ಲಿ ದಾರಿಗೆ ಅವಕಾಶವಿದ್ದಲ್ಲಿ ಮೀನಮೇಷ ಎಣಿಸದೆ ದಾರಿ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬಡವರ ಕೆಲಸವನ್ನು ಮಾಡಲು ಒತ್ತು ನೀಡಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ದರಖಾಸ್ತಿನಲ್ಲಿ ಮಂಜೂರಾಗಿರುವ ಭೂಮಿಗೆ ಸಂಬಂಧಿಸಿದಂತೆ ಸರಳೀಕೃತ ದುರಸ್ತಿ ಕಾರ್ಯ ಮಾಡಲಾಗುತ್ತಿದ್ದು, ಇದರಿಂದ ಹಳೆಯ ಕುಟುಂಬದ ಲೆಕ್ಕದಲ್ಲಿ 17 ರಿಂದ 18 ಸಾವಿರ ಕುಟುಂಬಗಳಿಗೆ ಪ್ರಯೋಜನ ದೊರೆಯುತ್ತದೆ. ಡಿಸೆಂಬರ್ ಒಳಗೆ ಮುಗಿಸಲಾಗುವುದು. 60 ರಿಂದ 90ರ ದಶಕದ ಮಧ್ಯದಲ್ಲಿ ಮಂಜೂರಾಗಿರುವ ಭೂಮಿಗಳನ್ನು ದುರಸ್ತಿ ಮಾಡುವ ಕೆಲಸ ನಡೆಯುತ್ತಿದೆ ಇದರಿಂದ ರೈತರಿಗೆ ದೊಡ್ಡ ಪ್ರಮಾಣದಲ್ಲಿ ಪರಿಹಾರ ದೊರೆಯುತ್ತದೆ ಎಂದು ತಿಳಿಸಿದರು.

ಕನಿಷ್ಠ 2 ದಾಖಲೆಗಳು ಇರುವ ಪ್ರಕರಣಗಳನ್ನು ಮಿಸ್ಸಿಂಗ್ ಕಮಿಟಿಗೆ ಇಟ್ಟು ದುರಸ್ತಿ ಮಾಡಲು ನಿರ್ದೇಶನ ನೀಡಲಾಗಿದೆ. ಇದರಿಂದ 25 ಸಾವಿರ ದುರಸ್ತಿ ಮಾಡಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.

ಹೇಮಾವತಿ ಜಲಾಶಯ ಯೋಜನೆಯಲ್ಲಿ ಭೂ ಮಂಜೂರಾತಿಯಲ್ಲಿ ಆಗಿರುವ ಅಕ್ರಮವನ್ನು ಪರಿಶೀಲಿಸಿ ಅರ್ಹರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಒಂದು ಸಮಿತಿಯನ್ನು ರಚಿಸಿ ಶಾಶ್ವತ ಪರಿಹಾರ ಒದಗಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.

ಭೂ ಮಂಜೂರಾತಿಯಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚು ಸಮಸ್ಯೆಗಳಿವೆ ಸುಪ್ರೀಂಕೋರ್ಟ್ ತೀರ್ಪು ಮೀರಿ ಕೆಲಸ ಮಾಡಲು ಸಾಧ್ಯವಿಲ್ಲ, ಕಾನೂನು ಚೌಕಟ್ಟಿನಲ್ಲಿ ಸಾಧ್ಯವಾದಷ್ಟು ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಗ್ರಾಮ ಪಂಚಾಯಿತಿಗಳಲ್ಲಿ ಖಾತೆ ಮಾಡಿ ಕೊಡುತ್ತಿಲ್ಲ ಎಂದು ದೂರುಗಳಿವೆ. ಮುಂದಿನ ದಿನಗಳಲ್ಲಿ ಇ-ಖಾತೆ ಮಾಡಲು ಅಭಿಯಾನ ಮಾಡಲಾಗುತ್ತದೆ ಎಂದು ತಿಳಿಸಿದರು.

ರಸ್ತೆ ದುರಸ್ತಿ, ಚರಂಡಿ, ಅಂಗನವಾಡಿ, ಸಮುದಾಯ ಭವನಕ್ಕೆ ಜಾಗ, ಅಂಬೇಡ್ಕರ್ ಭವನಕ್ಕೆ ಜಾಗ, ಹದ್ದುಬಸ್ತು, ಒತ್ತುವರಿ ತೆರವು, ವೃದ್ಧಾಶ್ರಮಕ್ಕೆ ಜಾಗ ಕೆಎಸ್‌ಆರ್‌ಟಿಬಸ್ ಸೌಲಭ್ಯ, ಸಾಗುವಳಿ ಚೀಟಿ, ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ, ಖಾತೆ, ಪಹಣಿ, ಶಾಲಾ ಕಾಂಪೌಂಡ್, ಓಡಾಡಲು ರಸ್ತೆ, ಮೂಲ ಸೌಕರ್ಯಗಳು, ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿಗೆ, ವಿದ್ಯುತ್ ಕಂಬ ಸಂಬಂಧಿಸಿದಂತೆ ಮತ್ತಿತರ ವಿಷಯಗಳ ಕುರಿತಂತೆ ಅರ್ಜಿಗಳನ್ನು ಸ್ವೀಕರಿಸಿದರು.

ರಾಜ್ಯ ಗೃಹ ಮಂಡಳಿ ಅಧ್ಯಕ್ಷರೂ ಆದ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಸ್ವೀಕೃತಿಯಾಗಿರುವ ಅರ್ಜಿಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ಮೂಲಕ ಜನರಿಗೆ ನ್ಯಾಯ ಒದಗಿಸಲು ಪ್ರಮಾಣಿಕ ಪ್ರಯತ್ನ ಮಾಡಲು ಅಧಿಕಾರಿಗಳಿಗೆ ತಿಳಿಸಿದರು.

ವಿಜಯಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ 1,10,000 ಜನರಿಗೆ ಕಂದಾಯ ದಾಖಲಾತಿ ಒದಗಿಸಲಾಯಿತು. ಅದೇ ರೀತಿ ಹಾಸನ ಜಿಲ್ಲೆಯಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸುವ ಮೂಲಕ ಕಂದಾಯ ಆಂದೋಲನ ಕಾರ್ಯಕ್ರಮ ಮಾಡುವುದಾಗಿ ತಿಳಿಸಿದರು.

ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಪೋಡಿ ಮಾಡಲು ಸರಳೀಕರಣ ಮಾಡಿ ಕಂದಾಯ ಅದಾಲತ್ ಮೂಲಕ ತಹಸೀಲ್ದಾರ್‌ಗಳು ಮಾಡಲು ಅವಕಾಶ ಕಲ್ಪಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೆಳಗ್ಗೆ 11.30ಕ್ಕೆ ಆರಂಭವಾದ ಜನಸ್ಪಂದನಾ ಕಾರ್ಯಕ್ರಮ ಸಂಜೆ 7.30 ವರೆಗೆ ಮುಂದುವರಿದು ಮನವಿ ಸ್ವೀಕರಿಸಲಾಯಿತು.

ಶಾಸಕ ಸಿಮೆಂಟ್ ಮಂಜು, ಜಿಲ್ಲಾಧಿಕಾರಿ ಲತಾಕುಮಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಬ್ ಕುಮಾರ್, ಉಪ ವಿಭಾಗಾಧಿಕಾರಿ ಮಾರುತಿ, ರಾಜೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net