

ಮಾಗಡಿ : ತಾಲೂಕಿನಿಂದ ಸೋಲೂರು ಹೋಬಳಿ ಬೇರ್ಪಡಿಸಿದರೆ ಭಾರತದಿಂದ ಜಮ್ಮು ಕಾಶ್ಮಿರವನ್ನು ತೆಗೆದರೆ ಭೂಪಟದಲ್ಲಿ ಹೇಗೆ ಆಗುವುದೋ, ಆ ರೀತಿ ಮಾಗಡಿ ತಾಲೂಕು ಆಗುವುದು ಬೇಡ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ನೆಲಮಂಗಲ ಶಾಸಕರು ತಾವರೆಕೆರೆ ಹೋಬಳಿಯವರು. ಅವರ ಶ್ರಮದಿಂದ ಶಾಸಕರಾಗಿದ್ದಾರೆ. ನಮ್ಮ ತಾಲೂಕಿನಿಂದ ಸೋಲೂರು ಹೋಬಳಿಯನ್ನು ವಿಭಜಿಸುವುದು ಸೂಕ್ತವಲ್ಲ. ತಾಲೂಕು ಮರು ವಿಂಗಡಣೆಯಾದ ನಂತರ ಜಿಲ್ಲೆಯಾಗಿದೆ. ಆದ್ದರಿಂದ ಸೋಲೂರು ಹೋಬಳಿ ಮಾಗಡಿಗೆ ಸೇರಿಲ್ಲ. ಮೊದಲು ಜಿಲ್ಲೆಯಾಗಿ ನಂತರ ತಾಲೂಕಾಗಿದ್ದರೆ ಮಾಗಡಿ ಕ್ಷೇತ್ರಕ್ಕೆ ಸೋಲೂರು ಸೇರ್ಪಡೆಯಾಗುತಿತ್ತು. ಮುಂದೆ ತಾಲೂಕು ಮರು ವಿಂಗಡಣೆಯಾದರೆ ಸೋಲೂರು ಮಾಗಡಿಗೆ ಸೇರಲಿದೆ ಎಂದರು.
ಮಾಗಡಿ ಜತೆಗೆ ಭಾವನಾತ್ಮಕ ಸಂಬಂಧವಿರುವ ಸೋಲೂರನ್ನು ನೆಲಮಂಗಲಕ್ಕೆ ಸೇರ್ಪಡೆ ಮಾಡದೆ ಮಾಗಡಿಗೆ ಸೇರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಮನವಿ ಮಾಡಲಾಗಿದೆ ಎಂದರು.
ಹೋಬಳಿಗಳನ್ನು ಕಿತ್ತು ಬೇರೆ, ಬೇರೆ ತಾಲೂಕುಗಳಿಗೆ ಸೇರಿಸುವ ಪ್ರಕ್ರಿಯೆ ಆರಂಭವಾದರೆ ರಾಜ್ಯದ ಬಹುತೇಕ ಹೋಬಳಿಗಳಲ್ಲಿ ಜನ ದಂಗೆ ಏಳುವ ವಾತಾವರಣ ಸೃಷ್ಟಿಯಾಗುತ್ತದೆ, ಅದಕ್ಕೆ ಅವಕಾಶ ಮಾಡಿಕೊಡಬಾರದು. ನಾವು ಯಾವತ್ತು ಸೋಲೂರು ಹೋಬಳಿಯನ್ನು ಕಡೆಗಣಿಸಿಲ್ಲ. ಸೊಲೂರು ಹೋಬಳಿ ನೆಲಮಂಗಲ ಕ್ಷೇತ್ರಕ್ಕೆ ಸೇರ್ಪಡೆಗೊಳಿಸುವ ವಿಚಾರವನ್ನು ನೆಲಮಂಗಲ ಶಾಸಕರು ಕೈಬಿಡಬೇಕು ಎಂದರು.
ಜನಾಭಿಪ್ರಾಯ ಮುಖ್ಯವಲ್ಲ, ಆಡಳಿತಾತ್ಮಕ ಅನುಕೂಲ ಮುಖ್ಯ. ಸೋಲೂರು ಹೋಬಳಿಯನ್ನು ನೆಲಮಂಗಲಕ್ಕೆ ಸೇರಿಸಿದರೆ ಜಿಲ್ಲಾಧಿಕಾರಿಗಳನ್ನು ನೋಡಲು ದೇವನಹಳ್ಳಿಗೆ ಹೋಗಬೇಕು. ಆದರೆ, ನಮಗೆ ರಾಮನಗರ ಹತ್ತಿರವಾಗಿದೆ ಎಂದು ಸಾಕಷ್ಟು ಮಂದಿ ಮುಖಂಡರು ನನಗೆ ಮನವಿ ನೀಡಿದ್ದಾರೆ ಎಂದರು.
ಪುರಸಭಾಧ್ಯಕ್ಷೆ ರಮ್ಯಾ ನರಸಿಂಹಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರು, ಆನಂದ್, ಟಿಎಪಿಸಿಎಂಎಸ್ ಮಾಜಿ ಉಪಾಧ್ಯಕ್ಷ ಎಂ.ಆರ್.ಮಂಜುನಾಥ್ ಇತರರು ಇದ್ದರು.
ಕನಸು ಕಾಣುತ್ತಿದ್ದಾರೆ
ಸರ್ಕಾರ ಬೀಳುತ್ತದೆ ಎಂದು ಬಿಜೆಪಿ ನಾಯಕರು ಕನಸು ಕಾಣುತ್ತಿದ್ದಾರೆ. ಎಲ್ಲ ವರ್ಗಗಳ ನಾಯಕರು ಮುಖ್ಯಮಂತ್ರಿಯಾಗುವ ಅವಕಾಶ ಇರುವುದು ಕಾಂಗ್ರೆಸ್‌ಗೆ ಮಾತ್ರ. ಮುಖ್ಯಮಂತ್ರಿಯಾಗಲು ಅದರದೆಯಾದ ನೀತಿ, ನಿಯಮಗಳಿವೆ, ಶಾಸಕರು, ಹೈಕಮಾಂಡ್ ಇದೆ. ಸತೀಶ್ ಜಾರಕಿಹೊಳಿ ಅವರು ಸಿಎಂ ಆಗುತ್ತೇನೆ ಎಂದು ದೆಹಲಿಗೆ ಹೋಗಿಲ್ಲ. ಸಾಧಕ, ಬಾಧಕ ವಿಚಾರಗಳ ಬಗ್ಗೆ ಚರ್ಚೆಮಾಡುತ್ತಿದ್ದಾರೆ. ಇದರಲ್ಲಿ ತಪ್ಪೇನೂ ಇಲ್ಲ. ಸಿಎಂ ಆಗೋದಕ್ಕೆ ನಮ್ಮ ಪಕ್ಷ ಕುಟುಂಬದ ಪಕ್ಷವೇ, ಒಬ್ಬರ ಹಿಡಿತದಲ್ಲಿ ಪಕ್ಷ ಇಲ್ಲ, ನಮ್ಮದು ಹೈಕಮಾಂಡ್ ಪಕ್ಷ ಎಲ್ಲವೂ ಹೈಕಮಾಂಡ್‌ನಲ್ಲಿ ನಡೆಯಲಿದೆ ಎಂದು ಶಾಸಕರು ಹೇಳಿದರು.
ಮುಡಾ ವಿಚಾರದಲ್ಲಿ ಮುಖ್ಯಮಂತ್ರಿ ಪಾಲುದಾರಿಕೆಯಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಏಕೆ ರಾಜೀನಾಮೆ ನೀಡಬೇಕು. ಮುಖ್ಯಮಂತ್ರಿಗಳ ತಪ್ಪಿಲ್ಲದಿದ್ದರೂ ಸಿಎಂ ಪತ್ನಿಗೆ ಅರಿಶಿಣ, ಕುಂಕುಮಕ್ಕೆ ಬಂದ ನಿವೇಶನಗಳನ್ನು ವಾಪಸ್ ನೀಡಿದ್ದಾರೆ. ಈ ಪದ್ಧತಿಯನ್ನು ಕಳ್ಳಕಾಕರು ರಾಜಕಾರಣಿಗಳು ಅನುಸರಿಸಿದರೆ ದೇಶ ಸುಭಿಕ್ಷವಾಗುತ್ತದೆ ಎಂದರು.