

ಹುಣಸೂರು: ಜಲ ಜೀವನ್ ಮಿಷನ್(ಜೆಜೆಎಂ)ಕಾಮಗಾರಿಯಲ್ಲಿ ಯಾವುದೇ ಲೋಪವಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ ಸೂಚಿಸಿದರು.
ತಾಲೂಕಿನ ಹುಸೇನ್‌ಪುರ ಮತ್ತು ಮನುಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಕ್ರವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ, ಅಂಗನವಾಡಿ ಮತ್ತು ಕೂಸಿನ ಮನೆಗಳಿಗೆ ಭೇಟಿ ನೀಡಿದ ನಂತರ ಗ್ರಾಪಂ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ನರೇಗಾ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳ್ಳುವ ಕ್ರಿಯಾ ಯೋಜನೆಯಲ್ಲಿನ ಕಾಮಗಾರಿಯನ್ನು ಶೀಘ್ರ ಕೈಗೊಳ್ಳಬೇಕು. ಕೆರೆ ಅಭಿವೃದ್ಧಿ, ಬದು ನೀರು ನಿರ್ವಹಣಾ ಕಾರ್ಯಗಳನ್ನು ಸಮರ್ಪಕವಾಗಿ ಕೈಗೊಳ್ಳಬೇಕು. ಕರ ವಸೂಲಾತಿ, ಗ್ರಂಥಾಲಯ, ಎನ್.ಆರ್.ಎಲ್.ಎಂ ಚಟುವಟಿಕೆಗಳು, ಘನ ತ್ಯಾಜ್ಯ ವಿಲೇವಾರಿ ಘಟಕ, ಇ-ಸ್ವತ್ತು, ವಸತಿ ಯೋಜನೆ, ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ, ಕುಡಿಯುವ ನೀರು, ಶೌಚಗೃಹ, ಕೃಷಿ ಅರಣ್ಯೀಕರಣ, ಮೆಡಿಸನ್ ಪ್ಲಾಂಟ್, ಆರೋಗ್ಯ ಕರ ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ಯಾವುದೇ ಅಸಡ್ಡೆ ತೋರಬಾರದು. ಕೇಂದ್ರ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಜಲ ಜೀವನ್ ಮಿಷನ್ ಯೋಜನೆಯ ಜಾರಿಯಲ್ಲಿ ಕೆಲವೊಂದು ದೂರುಗಳು ಕೇಳಿಬಂದಿವೆ. ದೂರುಗಳು ಬಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸಮಸ್ಯೆ ಪರಿಹರಿಸಬೇಕೆಂದು ಸೂಚಿಸಿದರು.
ನಂತರ ಎರಡು ಗ್ರಾಪಂಗಳ ವ್ಯಾಪ್ತಿಯ ಕೆಲ ಅಂಗನವಾಡಿ ಕೇಂದ್ರಗಳು ಮತ್ತು ಕೂಸಿನ ಮನೆಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. ಶೌಚಗೃಹ ಅವ್ಯವಸ್ಥೆ, ಆಹಾರ ಪೂರೈಕೆ ಮತ್ತು ಆಹಾರ ವಿತರಣೆಯ ರಿಜಿಸ್ಟರ್ ನಿರ್ವಹಣೆ ಪರಿಶೀಲಿಸಿದರು. ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಪಿಡಿಒಗಳಿಗೆ ಸೂಚನೆ ನೀಡಿದರು. ನಂತರ ಬಿಳಿಕೆರೆ ಗ್ರಾಮ ಪಂಚಾಯಿತಿಯ ಪಟ್ಟಲದಮ್ಮನ ಕೆರೆ ಪ್ರದೇಶಕ್ಕೆ ತೆರಳಿ ಅರಣ್ಯೀಕರಣದ ಮೂಲಕ ಆ ಪ್ರದೇಶವನ್ನು ಅಭಿವೃದ್ಧಿಪಡಿಸುವಂತೆ ಪಿಡಿಒಗೆ ತಿಳಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಹೊಂಗಯ್ಯ, ಪಿಆರ್‌ಇಡಿ ಇಲಾಖೆ ಜಿಲ್ಲಾ ಕಾರ್ಯನಿರ್ವಾಹಕ ಇಂಜಿನಿಯರ್ ರಂಜಿತ್ ಕುಮಾರ್, ಪಿಆರ್‌ಡಬ್ಲುೃ ಇಲಾಖೆಯ ಮಹಮ್ಮದ್ ಖಲೀಂ, ಎಇಇ ಪುಟ್ಟನಾಗರಾಜು, ಜೆಇ ಸಚಿನ್, ಎಇ ಮಹೇಂದ್ರ, ನರೇಗಾ ಸಹಾಯಕ ನಿರ್ದೇಶಕ ಗಿರಿಧರ್, ಹುಸೇನಪುರ ಗ್ರಾಪಂ ಅಧ್ಯಕ್ಷೆ ಗಾಯತ್ರಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಛಾಯಾ, ಸಂತೋಷ್, ತಾಲೂಕು ತಾಂತ್ರಿಕ ಸಂಯೋಜಕರು, ನರೇಗಾ ಇಂಜಿನಿಯರ್‌ಗಳು, ಗ್ರಾಮ ಪಂಚಾಯಿತಿ ಸದಸ್ಯರು, ಕಾರ್ಯದರ್ಶಿ ಹಾಜರಿದ್ದರು.