

ವಿಜಯಪುರ: ರಜೆಗೆಂದು ಎರಡು ದಿನಗಳ ಹಿಂದೆ ಊರಿಗೆ ಬಂದಿದ್ದ ಯೋಧನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಸರೂರ ಗ್ರಾಮದ ಹಣಮಂತ್ರಾಯ ಹೂಗಾರ (30) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ಸೈನಿಕ.
ಹಣಮಂತ್ರಾಯ ಭಾರತೀಯ ಸೇನೆಯಲ್ಲಿ ಜನರಲ್ ಡ್ಯೂಟಿ ಸೋಲ್ಜರ್ ಆಗಿ ಕಳೆದ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, 2 ದಿನಗಳ ಹಿಂದಷ್ಟೇ ಊರಿಗೆ ಮರಳಿದ್ದ. ಈತ ಹೊಲದಲ್ಲಿನ ಮರವೊಂದಕ್ಕೆ ನೇಣು ಹಾಕಿಕೊಂಡಿದ್ದ.
ಸೇನೆಯಲ್ಲಿನ ಮೇಲಧಿಕಾರಿಗಳ ಕಿರುಕುಳದಿಂದ ಬೇಸತ್ತು ಇತ್ತೀಚೆಗೆ ಮಾನಸಿಕವಾಗಿ ಖಿನ್ನನಾಗಿರುತ್ತಿದ್ದ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯೋಧನ ತಂದೆ ಶಿವಪ್ಪ ಹೂಗಾರ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪುತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.