ಮಣ್ಣಿನ ಫಲವತ್ತತೆಗೆ ಕೊಟ್ಟಿಗೆ ಗೊಬ್ಬರ ಸಂಜೀವಿನಿ

134
Published on

ಹಿರಿಯೂರು: ಕೊಟ್ಟಿಗೆ ಗೊಬ್ಬರದ ಅಧಿಕ ಬಳಕೆಯಿಂದ ಮಣ್ಣಿನ ಫಲವತ್ತತೆ ಹೆಚ್ಚಿ, ಇಳುವರಿಯೂ ಹೆಚ್ಚಾಗಲಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಕುಮಾರ್ ಹೇಳಿದರು.

ಹೈನುಗಾರಿಕೆಯಲ್ಲಿ ಸಮತೋಲನ ಆಹಾರ ಪೂರೈಕೆ ಮತ್ತು ಆರೋಗ್ಯ ರಕ್ಷಣೆ ಕುರಿತು ತಾಲೂಕಿನ ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ದಶಕಗಳ ಹಿಂದೆ ವರ್ಷಗಟ್ಟಲೇ ಜಾನುವಾರು ಗೊಬ್ಬರ ಸಂಗ್ರಹಿಸಿ ಜಮೀನಿಗೆ ಹಾಕುತ್ತಿದ್ದರು. ಆಧುನಿಕತೆಯ ಭರಾಟೆಯಲ್ಲಿ ರಾಸಾಯನಿಕ ಗೊಬ್ಬರಗಳತ್ತ ಮುಖಮಾಡಿದ್ದಾರೆ. ಇದರಿಂದ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿದೆ.

ಸಮಗ್ರ ಕೃಷಿ ಪದ್ಧತಿ ಅನಿವಾರ್ಯವಾಗಿದೆ. ಹಸುಗಳನ್ನು ಸಾಕಿದರೆ ಹೈನುಗಾರಿಕೆಯಿಂದ ನಿರಂತರ ಆದಾಯ ದೊರೆಯುವುದು. ಸಗಣಿ ಮತ್ತು ಗಂಜಲದಿಂದ ಜೀವಾಮೃತ, ಬೀಜಾಮೃತ ತಯಾರಿಸಿ ಮಣ್ಣಿನ ಆರೋಗ್ಯ ಸುಧಾರಣೆ ಜತೆಗೆ ಉತ್ತಮ ಬೆಳೆ ಹಾಗೂ ಇಳುವರಿ ಪಡೆಯಬಹುದೆಂದು ಸಲಹೆ ನೀಡಿದರು.

ಡಾ.ಓಂಕಾರಪ್ಪ, ಡಾ.ಸರಸ್ವತಿ, ಡಾ.ಮಹಂತೇಶ್, ಗೀತಾಕುಮಾರಿ, ಆನಂದ್ ಆರ್.ಬಂಗೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net