

ತುಮಕೂರು: ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗೆ ಪಟ್ಟು ಹಿಡಿದಿರುವ ಮಾಜಿ ಸಚಿವ ಸೊಗಡುಶಿವಣ್ಣ ಪಕ್ಷದ ವರಿಷ್ಠರ ಗಮನ ಸೆಳೆಯಲು ವಿನೂತನ ರೀತಿಯಲ್ಲಿ ಜೋಳಿಗೆ ಹಿಡಿದು ತಮಟೆ ಬಡಿಯುವ ಚಳವಳಿಯನ್ನು ಮಾ.12 ರಂದು ಭಾನುವಾರ ಮಧ್ಯಾಹ್ನ ಶುಭಘಳಿಗೆ 3 ಗಂಟೆಗೆ ಆರಂಭಿಸಿದ್ದಾರೆ. ಅಲ್ಲದೆ, ಒಂದು ಜೋಳಿಗೆಯನ್ನು ವೋಟಿಗಾಗಿ, ಮತ್ತೊಂದು ಜೋಳಿಗೆ ನೋಟು ನೀಡುವಂತೆ ಮತದಾರಪ್ರಭು ಬಳಿ ಹೋಗುವುದಾಗಿ ಹೇಳುವ ಮೂಲಕ ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆ ಖಚಿತ ಎಂಬ ಸಂದೇಶವನ್ನು ಕೂಡ ರವಾನಿಸಿದ್ದಾರೆ.
4 ಬಾರಿ ಶಾಸಕರಾಗಿ 3 ಬಾರಿ ಸಚಿವರಾಗಿದ್ದ ಸೊಗಡುಶಿವಣ್ಣ 2013ರಲ್ಲಿ ಬಿಜೆಪಿ-ಕೆಜೆಪಿ ಇಬ್ಭಾಗವಾದ ಸಂದರ್ಭದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದರು. ಕೆಜೆಪಿಯಿಂದ ಸ್ಪರ್ಧಿಸಿದ್ದ ಜಿ.ಬಿ.ಜ್ಯೋತಿಗಣೇಶ್ 2ನೇ ಸ್ಥಾನ ಪಡೆದಿದ್ದರು. ಹಾಗಾಗಿ, 2018ರಲ್ಲಿ ಬಿಜೆಪಿಯಲ್ಲಿ ಕೆಜೆಪಿ ವಿಲೀನವಾದ ಬಳಿಕ ಅನಿವಾರ್ಯವಾಗಿ ಜಿ.ಬಿ.ಜ್ಯೋತಿಗಣೇಶ್‌ಗೆ ಟಿಕೆಟ್ ತ್ಯಾಗ ಮಾಡುವಂತಾಯಿತು. ಹಾಲಿ ಶಾಸಕ ಜ್ಯೋತಿಗಣೇಶ್‌ಗೆ ಪಕ್ಷವು ಮತ್ತೆ ಮಣೆ ಹಾಕುವ ಸಾಧ್ಯತೆ ಹಿನ್ನೆಲೆಯಲ್ಲಿ ಪಕ್ಷದ ಟಿಕೆಟ್‌ಗಾಗಿ ಪಟ್ಟು ಹಿಡಿದು ಕುಳಿತಿರುವ ಸೊಗಡು ಈ ಬಾರಿ ಕಟ್ಟಕಡೆಯ ಪ್ರಯತ್ನವಾಗಿ ಹೊಸ ಅವತಾರವನ್ನು ಎತ್ತಿದ್ದಾರೆ.