ಸೋಡಿಗದ್ದೆ ಶ್ರೀ ಮಹಾಸತಿ ದೇವರ ಜಾತ್ರೆಗೆ ಚಾಲನೆ

23bkl2 sodigadde temple
Published on

ಭಟ್ಕಳ: ತಾಲೂಕಿನ ಸುಪ್ರಸಿದ್ಧ ಶಕ್ತಿ ಕ್ಷೇತ್ರಗಳಲ್ಲಿ ಒಂದಾದ ತಾಲೂಕಿನ ಸೋಡಿಗದ್ದೆ ಶ್ರೀ ಮಹಾಸತಿ ದೇವರ ಜಾತ್ರೆಯು ಗುರುವಾರ ಹಾಲಹಬ್ಬದಿಂದ ಅದ್ದೂರಿಯಾಗಿ ಆರಂಭಗೊಂಡಿದ್ದು, ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಚಾಲನೆ ನೀಡಿದರು.

ಗುರುವಾರ ಬೆಳಗ್ಗೆಯಿಂದಲೇ ಭಕ್ತರು ಶ್ರೀ ದೇವರಿಗೆ ಹೂ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದುಕೊಂಡರು. ಭಕ್ತರು ಸಾಲುಗಟ್ಟಿ ನಿಂತು ತಮ್ಮ ಹರಕೆ ತೀರಿಸಿದರು. ಜಿಲ್ಲೆಯಲ್ಲಿ ಅತ್ಯಂತ ದೊಡ್ಡ ಜಾತ್ರೆಯಾದ ಸೋಡಿಗದ್ದೆ ಶ್ರೀ ಮಹಾಸತಿ ಅಮ್ಮನವರ ಜಾತ್ರೆಗೆ ಊರ ಹಾಗೂ ಪರ ಊರಿನಿಂದ ಸಹಸ್ರಾರು ಭಕ್ತರು ಆಗಮಿಸಿದ್ದಾರೆ. ದೇವಸ್ಥಾನವನ್ನು ವಿಶೇಷ ರೀತಿಯ ಬಗೆಬಗೆಯ ಹೂಗಳಿಂದ ಅಲಂಕೃತಗೊಳಿಸಲಾಗಿತ್ತು. ಎರಡನೇ ದಿನದ ವಿಶೇಷ ಕೆಂಡ ಸೇವೆ ನಡೆಯಲಿದೆ.

ಸೋಡಿಗದ್ದೆ ಶ್ರೀ ಮಹಾಸತಿ ಜಾತ್ರೆಯ ವಿಶೇಷವೆಂದರೆ ದೇವರಿಗೆ ಗೊಂಬೆಗಳನ್ನು ಅರ್ಪಿಸುವುದು ಪ್ರಮುಖ ಹರಕೆಗಳಲ್ಲಿ ಒಂದಾಗಿದೆ. ಗೊಂಬೆಗಳಲ್ಲಿಯೂ ಕೂಡಾ ಮೂರು ವಿವಿಧ ಗಾತ್ರದ ಗೊಂಬೆಗಳನ್ನು ಅರ್ಪಿಸಲಿದ್ದು, ಭಕ್ತರು ತಮ್ಮ ಶಕ್ಱಾನುಸಾರ ಹರಕೆಯ ಗೊಂಬೆಗಳನ್ನು ನೀಡುತ್ತಾರೆ. ಗೊಂಬೆಗಳಲ್ಲಿ ಮಹಾಸತಿ, ಜಟ್ಟಿಗರಾಯ, ಮರದ ಹುಲಿರಾಯ, ನಾಗರಕಲ್ಲು, ಹಾಯ್ ಗೂಳಿ ಗೊಂಬೆಗಳನ್ನು ಹರಕೆಯ ರೂಪದಲ್ಲಿ ಸಲ್ಲಿಸಲಾಯಿತು.

ಜಾತ್ರಾ ಸಮಯದಲ್ಲಿ ಪ್ರತಿ ನಿತ್ಯ ಭಕ್ತರು ಹೂವಿನ ಪೂಜೆ, ತೊಟ್ಟಿಲು ಸಮರ್ಪಣೆ, ಕಣ್ಣು, ಇತ್ಯಾದಿಗಳನ್ನು ಸಮರ್ಪಿಸಿ ತಮ್ಮ ಹರಕೆಯನ್ನು ತೀರಿಸಿದ್ದಾರೆ. ಈ ಬಾರಿ ಜಾತ್ರೆಯ ಸಂದರ್ಭದಲ್ಲಿ ಎಂಟು ದಿನಗಳ ಕಾಲ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ದೇವಾಲಯದ ಸುತ್ತಲು ಜಾತ್ರಾ ಮಹೋತ್ಸವದ ಅಂಗಡಿ-ಮುಂಗಟ್ಟುಗಳು ಜಾತ್ರೆಯ ವೈಭವವನ್ನು ಇನ್ನಷ್ಟು ಹೆಚ್ಚಿಸಿದವು. ಒಂಬತ್ತು ದಿನಗಳ ಕಾಲ ಅದ್ದೂರಿಯಾಗಿ ಜಾತ್ರೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net