ಸಾಮಾಜಿಕ- ಶೈಕ್ಷಣಿಕ ಸಮೀಕ್ಷಕರಿಗೆ ಪರೀಕ್ಷೆ

GBA SAMIKSHE
Published on

> ಪವನ್​ ಆಚಾರ್ಯ ನೀರ್ಚಾಲು ಬೆಂಗಳೂರು

ರಾಜಧಾನಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿ-ಗತಿ ಸಮೀಾ ಕಾರ್ಯ ಪ್ರಗತಿಯಲ್ಲಿದ್ದರೂ ಗಣತಿದಾರರು ಕೇಳುವ ಪ್ರಶ್ನೆಗಳಿಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ. ಇನ್ನೊಂದೆಡೆ, ಸಮೀಕ್ಷೆಗೆ ನಿಯೋಜನೆ ಆಗಿರುವ ನೌಕರರು ಕರ್ತವ್ಯ ನಿರ್ವಹಿಸಲು ನಾನಾ ಸಮಸ್ಯೆ ಎದುರಿಸುತ್ತಿದ್ದು, ಮಾಹಿತಿ ಸಂಗ್ರಹ ನಿಧಾನವಾಗುತ್ತಿದೆ.

ಮುಖ್ಯವಾಗಿ ಪಡಿತರ ಕಾರ್ಡ್​ ಮಾಹಿತಿ ನೀಡಿದರೆ ಎಲ್ಲಿ ತಮ್ಮ ಬಿಪಿಲ್​ ಕಾರ್ಡ್​ ರದ್ದಾಗುವುದೋ ಎಂಬ ಆತಂಕ ಹಲವರಿಂದ ವ್ಯಕ್ತವಾಗಿದೆ. ವೈಯಕ್ತಿಕ ಮಾಹಿತಿ ನೀಡುವುದರಿಂದ ಇತರ ಸಮಸ್ಯೆಗಳು ಉದ್ಭವಿಸಬಹುದು ಎಂದೆಣಿಸಿ ಜನರು ಅಪೂರ್ಣ ಮಾಹಿತಿ ನೀಡುತ್ತಿದ್ದಾರೆ. ಪರಿಣಾಮ, ಸಮೀಕ್ಷಕರು ಸಿಕ್ಕಷ್ಟು ಮಾಹಿತಿ ಸಂಗ್ರಹಿಸಿ ವಾಪಸಾಗುತ್ತಿದ್ದಾರೆ.

ಸಮೀೆಗೆ ಮತದಾರರ ಗುರುತಿನ ಪತ್ರ ಅಗತ್ಯವಿಲ್ಲ, ಅದಕ್ಕಾಗಿ ಸಮೀಕ್ಷಕರೂ ಒತ್ತಾಯಿಸಬಾರದು. ಮಾಹಿತಿ ನೀಡಲು ಜನ ಒಪ್ಪಿದಲ್ಲಿ "ಎಸ್​' ಎಂಬುದಾಗಿ ತಿಳಿಸಿದಲ್ಲಿ ಮಾತ್ರ ಪಡೆದುಕೊಳ್ಳಬಹುದು. ಆದರೆ, ಸಮೀಕ್ಷೆಗೆ ಆಧಾರ್​ ಕಾರ್ಡ್​ ಕೇಳಿದಾಗ ಕೆಲವು ಮಂದಿ ಆಧಾರ್​ ಸಂಖ್ಯೆ ಕೊಟ್ಟರೂ, ಬಳಿಕ ಒಟಿಪಿ ತಿಳಿಸುವುದಿಲ್ಲ ಎಂದು ಸಮೀಕ್ಷೆ ಸಿಬ್ಬಂದಿ ತಿಳಿಸಿದ್ದಾರೆ. ಇದರಿಂದ ತಮ್ಮ ಬ್ಯಾಂಕ್​ ಖಾತೆ ಇತ್ಯಾದಿಗೆ ತೊಂದರೆ ಬರಬಹುದು ಎಂದುಕೊಂಡು ಒಟಿಪಿ ನೀಡುತ್ತಿಲ್ಲ. ಈ ಬಗ್ಗೆ ಜಿಬಿಎಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸಮಸ್ಯೆ ಬಗೆಹರಿಸುವ ಭರವಸೆಯಷ್ಟೇ ದೊರೆತಿದೆ ಎಂದು ಸಮೀಾ ಸಿಬ್ಬಂದಿ ಪ್ರತಿಕ್ರಿಯಿಸಿದ್ದಾರೆ.

ಸಮಸ್ಯೆ ಇದೆ ಎಂದಿದ್ದರು ಡಿಸಿಎಂ: ಸದಾಶಿವನಗರದಲ್ಲಿನ ಡಿಸಿಎಂ ನಿವಾಸದಲ್ಲಿ ಸಮೀೆ ನಡೆಸುವಾಗ ಸರ್ವರ್​ ತೊಡಕು ಎದುರಾದ ಹಿನ್ನೆಲೆ ಡಿ.ಕೆ. ಶಿವಕುಮಾರ್​ ಸಿಡಿಮಿಡಿಕೊಂಡಿದ್ದರು. ನನ್ನೊಬ್ಬನ ಮಾಹಿತಿ ಪಡೆಯಲು ಇಷ್ಟು ಸಮಯವಾದರೆ ಜನಸಾಮಾನ್ಯರ ಗತಿಯೇನು ಎಂದು ಪಾಲಿಕೆ ಆಯುಕ್ತರು ಸೇರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಘಟನೆಯನ್ನೇ ಉದಾಹರಣೆಯಾಗಿಸಿ ಹಲವು ಮಂದಿ "ನಾವು ಯಾವ ಧೈರ್ಯದಲ್ಲಿ ಮಾಹಿತಿ ನೀಡಬೇಕು' ಎಂದು ಪ್ರಶ್ನಿಸಿದ್ದಾರೆ.

ಗುರಿ ತಲುಪುವುದು ಹೇಗೆ?: ತಲಾ 200 ಮನೆಗಳನ್ನು ಸಮೀಕ್ಷೆ ಮಾಡುವ ಗುರಿಯನ್ನು ಪ್ರತಿ ಸಮೀಕ್ಷಕರಿಗೆ ನಿಗದಿಪಡಿಸಲಾಗಿದೆ. ಒಬ್ಬ ಸಮೀಕ್ಷಕರು ಗುರಿ ತಲುಪಬೇಕಿದ್ದರೆ ಪ್ರತಿದಿನ 20&25 ಮನೆಗಳಿಗೆ ಭೇಟಿ ನೀಡಿ ಮಾಹಿತಿ ಪೆಡಯಬೇಕು. ಒಂದು ಮನೆಯಲ್ಲಿ 4&5 ಮಂದಿ ಇದ್ದರೆ ಅವರೆಲ್ಲರ ಮಾಹಿತಿ ಪಡೆಯುವಷ್ಟರಲ್ಲಿ ಒಂದು ತಾಸಾಗಿರುತ್ತದೆ. ಹೀಗಿರುವಾಗ ಗುರಿ ತಲುಪುವುದು ಹೇಗೆ ಎಂಬ ಚಿಂತೆ ಸಿಬ್ಬಂದಿಯನ್ನು ಕಾಡುತ್ತಿದೆ.

ಜಾಗೃತಿಯ ಕೊರತೆ

ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯ ಮೂಲಕ ಸರ್ಕಾರ ಮಾಹಿತಿ ಕಲೆಹಾಕುತ್ತದೆ. ಇದರಿಂದ ಜನರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಸಮೀಕ್ಷೆಯಿಂದ ಸರ್ಕಾರಕ್ಕೆ ಬರುವ ಮಾಹಿತಿಯ ಆಧಾರದಲ್ಲಿ ಮುಂದಿನ ಯೋಜನೆಗಳನ್ನು ರೂಪಿಸಲು ಅನುಕೂಲವಾಗುತ್ತದೆ ಎಂಬ ಸಮೀೆಯ ಉದ್ದೇಶ ಕುರಿತು ಸರ್ಕಾರ ಅಥವಾ ಜಿಬಿಎ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕು. ಸಮೀಕ್ಷೆಯ ಕುರಿತು ವದಂತಿ, ಅಪಪ್ರಚಾರ ಹರಿದಾಡುತ್ತಿದ್ದು, ಅಂತಹವುಗಳಿಗೆ ಕಡಿವಾಣ ಹಾಕುವ ಕೆಲಸವನ್ನು ಸರ್ಕಾರ ಕೈಗೊಳ್ಳಬೇಕು ಎಂಬುದಾಗಿ ಕೆಲವರು ನೀಡಿದ್ದಾರೆ.

ಸಿಬ್ಬಂದಿ ಸಮಸ್ಯೆಗೆ ಪರಿಹಾರ ಸಮೀಕ್ಷೆ ನಡೆಸಬೇಕಾದ ಸ್ಥಳ ಹಾಗೂ ಸಿಬ್ಬಂದಿ ವಾಸಸ್ಥಳ ದೂರದಲ್ಲಿರುವುದು, ಅನಾರೋಗ್ಯ, ಗಂಭೀರ ಸಮಸ್ಯೆಯಿಂದ ಬಳಲುವವರಿಗೂ ವಿನಾಯಿತಿ ನೀಡದಿರುವ ಬಗ್ಗೆ ಕೆಲ ದಿನಗಳಿಂದ ಗೊಂದಲ ಸೃಷ್ಟಿಯಾಗಿತ್ತು. ಇದೀಗ ಅಂತಹ ಸಮಸ್ಯೆಗೆ ಬಹುತೇಕ ಪರಿಹಾರ ಸಿಕ್ಕಿದೆ. ಸಮೀೆಗೆ ನಿಯೋಜಿಸಿರುವ ಸಿಬ್ಬಂದಿ ತಮಗೆ ನಿಗದಿಯಾಗಿರುವ ಸ್ಥಳಕ್ಕೆ ತೆರಳಿ ಕೆಲಸ ಪ್ರಾರಂಭಿಸಿದ್ದಾರೆ ಎಂದು ಜಿಬಿಎ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ರಾಜಧಾನಿಯ ಎಲ್ಲ ನಾಗರಿಕರು ಈ ಸಮೀಕ್ಷೆಗೆ ಸಹಕರಿಸಬೇಕು. ಸಮೀೆಗೆ ಬೇಕಾದ ಅಗತ್ಯ ದಾಖಲೆಗಳಾದ ಆಧಾರ್​ ಕಾರ್ಡ್​, ರೇಷನ್​ ಕಾರ್ಡ್​ ಸೇರಿ ಇತರ ದಾಖಲೆಗಳನ್ನು ಇಟ್ಟುಕೊಂಡು ಗಣತಿದಾರರಿಗೆ ಮಾಹಿತಿ ನೀಡಬೇಕು. ಈಗಾಗಲೆ ನಮ್ಮ ಆಯುಕ್ತರು ಹಾಗೂ ಅಧಿಕಾರಿಗಳು ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆದ್ದರಿಂದ ಯಾವುದೇ ಗೊಂದಲ ಮತ್ತು ವದಂತಿಗೆ ಕಿವಿಗೊಡಬಾರದು. ಎಂ. ಮಹೇಶ್ವರ ರಾವ್​, ಜಿಬಿಎ ಮುಖ್ಯ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net