ಹಳೇ ವಿದ್ಯಾರ್ಥಿಗಳ ಸಾಮಾಜಿಕ ಕಾರ್ಯ ಸ್ಮರಣೀಯ

24 GJD 1- GURUVANDENE
Published on

ಗಜೇಂದ್ರಗಡ: ವಿದ್ಯಾರ್ಥಿಗಳು ಕಲಿಸಿದ ಶಿಕ್ಷಕರಿಗೆ ಗೌರವ ನೀಡುವುದರ ಜತೆಗೆ ಅನೇಕ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವುದು ಅನುಕರಣೀಯ ಎಂದು ಗದಗ ಶಿಕ್ಷಣ ಇಲಾಖೆ ವಿಶ್ರಾಂತ ಉಪನಿರ್ದೇಶಕ ಐ.ಬಿ. ಬೆನಕೊಪ್ಪ ಹೇಳಿದರು.

ಪಟ್ಟಣದ ಟಿಟಿಡಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಎಸ್.ಎಂ. ಭೂಮರಡ್ಡಿ ಪ್ರೌಢಶಾಲೆಯ 1988-89ನೇ ಸಾಲಿನ ಎಸ್​ಎಸ್ ಎಲ್​ಸಿ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಬಾಗಲಕೋಟೆಯ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಲಲಿತಾ ಹೊಸಪ್ಯಾಟಿ ಮಾತನಾಡಿ, ಪಾಠ ಹೇಳಿ, ಜ್ಞಾನಾರ್ಜನೆ ಮಾಡಿಸಿ ಬದುಕಿಗೆ ಬೆಳಕಾದ ಶಿಕ್ಷಕರನ್ನು ಎಂದಿಗೂ ಮರೆಯಬಾರದು. ಗುರುಗಳ ಸೇವೆಯನ್ನು ಸ್ಮರಿಸುವುದು ಮತ್ತು ಅವರಿಗೆ ಪ್ರತ್ಯಕ್ಷವಾಗಿ ಧನ್ಯತೆ ಸಮರ್ಪಣೆ ಮಾಡುವುದು ಸಾರ್ಥಕ ಕಾರ್ಯ. ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಹಿರಿಯ ವಿದ್ಯಾರ್ಥಿಗಳು 35 ವರ್ಷದ ನಂತರ ಒಂದೆಡೆ ಸೇರಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಮಾಜ ಸೇವಕ ಬಸವರಾಜ ಕೊಟಗಿ ಮಾತನಾಡಿ, ಪಾಠ ಮಾಡಿದ ಗುರುಗಳು ಯಾವುದೇ ಅಪೇಕ್ಷೆ ಇಲ್ಲದೆ ಶಿಷ್ಯರ ಭವಿಷ್ಯ ರೂಪಿಸುತ್ತಾರೆ. ಜೀವನಕ್ಕೆ ಮಾರ್ಗದರ್ಶಕರಾಗುತ್ತಾರೆ. ಆದರೆ, ಇಂದಿನ ಶಿಕ್ಷಣ ಪದ್ಧತಿ ಸಾಕಷ್ಟು ಬದಲಾಗಿದೆ. ಮಕ್ಕಳಿಗೆ ದಂಡಿಸದೆ, ಶಿಕ್ಷಿಸದೆ ಪಾಠ ಮಾಡಬೇಕು ಎಂದು ಪಾಲಕರೇ ತಾಕೀತು ಮಾಡುತ್ತಾರೆ. ಇದು ಬೇಸರದ ಸಂಗತಿ ಎಂದರು.

ನಿವೃತ್ತ ಶಿಕ್ಷಕ ಕೆ.ಎಸ್. ಗಾರವಾಡಹಿರೇಮಠ ಮಾತನಾಡಿ, 40 ವರ್ಷದ ಹಿಂದೆ ನಮ್ಮಿಂದ ಪಾಠ ಕೇಳಿದ ಮಕ್ಕಳು ಇಂದು ಉನ್ನತ ಸ್ಥಾನಗಳಲ್ಲಿದ್ದಾರೆ. ಅವರೆಲ್ಲರೂ ಒಂದೆಡೆ ಸೇರಿ ನಮ್ಮನ್ನು ನೆನಪಿಸಿಕೊಂಡು, ಗುರುವಂದನೆ ಸಲ್ಲಿಸಿರುವುದು ನಮ್ಮ ಬದುಕಿನ ಸುವರ್ಣ ಗಳಿಗೆ ಎಂದು ಶ್ಲಾಘಿಸಿದರು. ಶಿಕ್ಷಕರಾದ ಎಸ್.ಎಸ್. ತಾರಿಹಾಳ, ವಿ.ಎಸ್. ನವಲಗುಂದ, ಆರ್.ಕೆ. ಮಾಳೋದೆ, ಎಸ್.ಟಿ. ಶಿವಳ್ಳಿ, ಕೆ.ಎಸ್. ಗಾರವಾಡ ಹಿರೇಮಠ, ವಿ.ಎಫ್. ಕಾಳಗಿ, ಎಸ್.ಎಸ್. ವಾಲಿ ಅವರಿಗೆ ಗುರುವಂದನೆ ಸಮರ್ಪಿಸಲಾಯಿತು.

ರಾಜಶೇಖರ ಪಟ್ಟೇದ, ಐ.ಆರ್. ಅಕ್ಕಿ, ಎ.ಕೆ. ವಂಟಿ, ಬಿ.ಸಿ. ಅಂಗಡಿ, ಎಂ.ಎಸ್. ಮಕಾನದಾರ, ವೀರೇಶ ಗೌರಿಮಠ, ಸುಭಾಸ ಚನ್ನಿ, ಪಂಚಯ್ಯ ಹಿರೇಮಠ, ಬಸವರಾಜ ಅಣ್ಣಿಗೇರಿ, ಸಿ.ಎಸ್. ಮೂರಶಿಳ್ಳಿನ, ಎ.ಜಿ. ಬೂದಿಹಾಳ, ಪ್ರಕಾಶ ದಿವಾಣದ, ಕಮಲಾ ಚನ್ನಿ, ಗೌರಮ್ಮ ಕುಷ್ಟಗಿ, ಶಿವಲೀಲಾ ವಾಣಿ, ಜ್ಯೋತಿ ಮಾರನಬಸರಿ, ಓಂಕಾರಸಾ ಕಾಟವಾ, ಹನುಮಂತ ಕೆಂಚಿ, ಯಲ್ಲಪ್ಪ ಕಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net