ಸ್ವಾರ್ಥಕ್ಕಾಗಿ ಸಮಾಜಸೇವೆ

FotoJet (3)
Published on

ದುರದೃಷ್ಟಕರ ಎಂದ ಸಚಿವ ಡಾ.ಎಂ.ಸಿ. ಸುಧಾಕರ್ | ಚಿಕ್ಕಬಳ್ಳಾಪುರದಲ್ಲಿ ರೆಡ್‌ಕ್ರಾಸ್ ಭವನಕ್ಕೆ ಭೂಮಿಪೂಜೆ

ಚಿಕ್ಕಬಳ್ಳಾಪುರ : ರಾಜಕೀಯ ಭವಿಷ್ಯಕ್ಕಾಗಿ ತಾತ್ಕಾಲಿಕ ಸಮಾಜಸೇವೆ ಹೆಸರಿನಲ್ಲಿ ಪರಿಚಯಿಸಿಕೊಳ್ಳುವಂತಹ ಕೆಲಸಗಳು ಹೆಚ್ಚಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ.ಸುಧಾಕರ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ 4 ಕೋಟಿ ರೂ ವೆಚ್ಚದ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಪ್ರಾಮಾಣಿಕ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಮಾತ್ರ ಆತ್ಮತೃಪ್ತಿ ದೊರೆಯುತ್ತದೆ. ಹಾಗೆಯೇ ಬಡ ಜನರಿಗೂ ಅನುಕೂಲವಾಗುತ್ತದೆ. ಇದು ನಿಸ್ಸಂದೇಹವಾಗಿ ಶ್ಲಾಘನೀಯ. ಆದರೆ, ಸಮಾಜಸೇವೆ ಎನ್ನುವುದು ಇತ್ತೀಚೆಗೆ ಸ್ವಾರ್ಥಕ್ಕಾಗಿ ತಾತ್ಕಾಲಿಕ ಪ್ರಚಾರಕ್ಕೆ ಸೀಮಿತವಾಗಿರುವುದು ದುರದೃಷ್ಟಕರ ಎಂದು ತಿಳಿಸಿದರು.

ಕೆಲ ತೀರ್ಮಾನಗಳಿಂದಾಗಿ ರಾಜಕೀಯ ಜೀವನದಲ್ಲಿ ಎರಡು ಬಾರಿ ಎಡವಿದ್ದು ಇದರಿಂದ ಪಾಠವನ್ನು ಕಲಿತಿದ್ದೇನೆ. ಇದರ ನಡುವೆಯೂ ದೂರದೃಷ್ಟಿಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ವಿಚಾರದಲ್ಲಿ ರಾಜೀಯಾಗಿಲ್ಲ ಎಂದು ಸಚಿವ ಸುಧಾಕರ್ ತಿಳಿಸಿದರು.

ರಾಜ್ಯ ರೆಡ್‌ಕ್ರಾಸ್ ಸಂಸ್ಥೆ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ರೆಡ್ ಕ್ರಾಸ್ ಸಂಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಕಾಲಕ್ಕೆ ರೋಗಿಗಳಿಗೆ ರಕ್ತ ಪೂರೈಸಿ ಪ್ರಾಣ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ನಗರಸಭೆ ಅಧ್ಯಕ್ಷ ಎ.ಗಜೇಂದ್ರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಕೆ.ವಿ. ನವೀನ್ ಕಿರಣ್, ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಪತಿ ಎಂ.ಜಯರಾಮ್, ಖಜಾಂಚಿ ಪ್ರೊ. ಕೋಡಿರಂಗಪ್ಪ ಮತ್ತಿತರರು ಇದ್ದರು.

ಸನ್ಮಾನ ಕಾರ್ಯಕ್ರಮ

ಇತ್ತೀಚೆಗೆ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ದಾಖಲೆ ಮಟ್ಟದಲ್ಲಿ ರಕ್ತವನ್ನು ಸಂಗ್ರಹಿಸಿ ರೆಡ್‌ಕ್ರಾಸ್ ಸಂಸ್ಥೆಗೆ ನೀಡಿದ ಸಚಿವರ ಸಹೋದರ ಡಾ. ಎಂ.ಸಿ.ಬಾಲಾಜಿ, ಕೆ.ವಿ ಹಾಗೂ ಪಂಚಗಿರಿ ಶಿಕ್ಷಣ ದತ್ತಿ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ಅವರನ್ನು ಹಾಗೂ ಹೆಚ್ಚು ರಕ್ತದಾನ ಮಾಡಿದ ದಾನಿಗಳನ್ನು ಸನ್ಮಾನಿಸಲಾಯಿತು. ಲಾನುಭವಿಗಳಿಗೆ ಶ್ರವಣ ಸಾಧನಗಳನ್ನು ವಿತರಿಸಲಾಯಿತು.

13 ಬಾರಿ ರಕ್ತ ಕೊಟ್ಟಿರುವೆ

ಬಾಗೇಪಲ್ಲಿ ಕ್ಷೇತ್ರದಲ್ಲಿ ಸಾಮಾಜಿಕ ಸೇವಾ ಚಟುವಟಿಕೆಯೊಂದಿಗೆ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಸ್ವತಃ 13 ಬಾರಿ ರಕ್ತದಾನ ಮಾಡಿರುವೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ರಕ್ತದಾನವು ಜಾತ್ಯತೀತ ಕೆಲಸ. ತುರ್ತು ಆರೋಗ್ಯ ಸಂದರ್ಭದಲ್ಲಿ ಯಾವುದೇ ಜಾತಿಮತ ಭೇದ ನೋಡದೇ ರಕ್ತವನ್ನು ನೀಡಿ ಪ್ರಾಣವನ್ನು ಉಳಿಸಬೇಕಾಗುತ್ತದೆ ಎಂದರು. ರಕ್ತ ನಿಧಿ ಕೇಂದ್ರಕ್ಕೆ ಅಗತ್ಯ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net