ಭೀಮಕೋಲ ಪಂಚವಟಿ ವನ ಇಂದು ಉದ್ಘಾಟನೆ

೦೦೦೦೦೦೦೦೦೦೦೦
Published on

ವಿಜಯವಾಣಿ ಸುದ್ದಿಜಾಲ ಕಾರವಾರ
ಪಾಳು ಬಿದ್ದಿದ್ದ ತಾಪೂಕಿನ ಹಣಕೋಣ ಗ್ರಾಪಂ ವ್ಯಾಪ್ತಿಯ ಭೀಮಕೋಲ ಕೆರೆಗೆ ಈಗ ಜೀವ ಕಳೆ ಬಂದಿದೆ. ಪ್ರವಾಸಿ ತಾಣದ ಬಿರುದು ಬಂದಿದೆ. ಜಿಪಂ ತಾಪಂನ ವಿವಿಧ ಅನುದಾನ ಬಳಸಿ ಇಲ್ಲಿ ನಿರ್ಮಿಸಿದ ಉದ್ಯಾನ ಮಾ.17 ರಂದು ಲೋಕಾರ್ಪಣೆಗೊಳ್ಳಲಿದೆ.
ಬೆಳಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೀಮಕೋಲ ಉದ್ಯಾನ ಉದ್ಘಾಟಿಸುವರು. ಶಾಸಕಿ ರೂಪಾಲಿ ನಾಯ್ಕ, ಎಂಎಲ್‌ಸಿ ಗಣಪತಿ ಉಳ್ವೇಕರ್, ಜಿಪಂ ಸಿಇಒ ಈಶ್ವರ ಕಾಂದೂ, ಸಿಸಿಎಫ್ ವಸಂತರೆಡ್ಡಿ ಉಪಸ್ಥಿತರಿರುವರು.
18.5 ಲಕ್ಷ ವೆಚ್ಚ:
ಜಿಪಂನ 15 ನೇ ಹಣಕಾಸು ಹಾಗೂ ಅನಿರ್ಬಂಽತ ನಿಽ 5 ಲಕ್ಷ ರೂ. , ತಾಪಂನ 15 ನೇ ಹಣಕಾಸು ಹಾಗೂ ಅನಿರ್ಬಂಽತ ನಿಧಿ ಸೇರಿ 9.5 ಲಕ್ಷ ರೂ. ಹಾಗೂ ಉದ್ಯೋಗ ಖಾತ್ರಿ ಯೋಜನೆಯ 4.3 ಲಕ್ಷ ರೂ. ಸೇರಿ ಒಟ್ಟು 18.5 ಲಕ್ಷ ರೂ. ವೆಚ್ಚದಲ್ಲಿ ಸಾಮಾಜಿಕ ಅರಣ್ಯ ವಿಭಾಗದಿಂದ ಪಂಚವಟಿ ವನ ಹೆಸರಿನ ಉದ್ಯಾನ ನಿರ್ಮಾಣ ಮಾಡಲಾಗಿದೆ. ಎರಡು ಪ್ಯಾರಾಗೋಲಾಗಳು, ಜಿಂಕೆ,ನವಿಲು ಮುಂತಾದ ಪ್ರಾಣಿಗಳನ್ನು ಸಿಮೆಂಟ್‌ನಿಂದ ಮಾಡಿ ನಿಲ್ಲಿಸಲಾಗಿದೆ. ಲಾನ್ ಹಾಗೂ ಸಾಕಷ್ಟು ಗಿಡಗಳನ್ನು ನೆಡಲಾಗಿದ್ದು, ಜನಾಕರ್ಷಣೆಯ ಕೇಂದ್ರವಾಗಲಿದೆ.
ಪಾಳು ಬಿದ್ದ ಕೆರೆಗೆ ಜೀವ:
ಈ ಭಾಗದ ನೀರಾವರಿಗಾಗಿ ಸಣ್ಣ ನೀರಾವರಿ ಇಲಾಖೆಯಿಂದ ದಶಕಗಳ ಹಿಂದೆ ನಿರ್ಮಿಸಿದ ಕೆರೆ ವ್ಯರ್ಥವಾಗಿತ್ತು. ಈ ಭಾಗದಲ್ಲಿ ಕೃಷಿ ಮಾಡುವವರೇ ಇಲ್ಲದ ಕಾರಣ ಕೆರೆ ನಿರ್ವಹಣೆ ಇಲ್ಲದೇ ಪಾಳು ಬಿದ್ದಿತ್ತು. ನೀರು ಉಕ್ಕಿ ಹರಿಯಲು ಮಾಡಿದ ಬಾಂದಾರ ಹಾಳಾಗಿತ್ತು. ಆದರೆ, ಎತ್ತರದ ಪ್ರದೇಶದಲ್ಲಿ ಗುಡ್ಡದ ಬುಡದಲ್ಲಿರುವ ಈ ಕೆರೆಯ ಪ್ರಕೃತಿ ಸೌಂದರ್ಯ ಎಂಥವರನ್ನೂ ಸೆಳೆಯುವಂತಿತ್ತು. ಈ ಬಗ್ಗೆ ವಿಜಯವಾಣಿ ಮೂರು ವರ್ಷಗಳ ಹಿಂದೆ ವರದಿ ಮಾಡಿತ್ತು. ಅದನ್ನು ಗಮನಿಸಿ ಆಗಿನ ಜಿಪಂ ಸಿಇಒ ಪ್ರಿಯಾಂಗಾ ಎಂ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬಾಂದಾರ ಸಮೀಪ ಕೆಲವು ಬೆಂಚ್‌ಗಳನ್ನು ಅಳವಡಿಸಿ, ಅದರ ಸೌಂದರ್ಯ ಹೆಚ್ಚಿಸಿದ್ದರು. ಆಗಲೇ ಸಾಕಷ್ಟು ಪ್ರವಾಸಿಗರು ಇಲ್ಲಿ ಆಗಮಿಸುತ್ತಿದ್ದಾರೆ. ಈಗ ಎರಡನೇ ಹಂತದಲ್ಲಿ ವಿವಿಧ ಅನುದಾನ ಬಳಸಿ ಇನ್ನಷ್ಟು ಆಕರ್ಷಣೆಯ ಕೇಂದ್ರ ಮಾಡಲಾಗಿದೆ. ಮಳೆಗಾಲದಲ್ಲಿ ಇಲ್ಲಿನ ಸೌಂದರ್ಯ ವರ್ಣಿಸಲಸದಳ.
ನಾಗರ ಮುಡಿ ಅಭಿವೃದ್ಧಿ
ಚೆಂಡಿಯಾ ಗ್ರಾಪಂ ವ್ಯಾಪ್ತಿಯಲ್ಲಿರುವ ನಾಗರಮಡಿ ಜಲಪಾತಕ್ಕೆ ತೆರಳುವ ಮಾರ್ಗವನ್ನೂ ಇದೇ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಅಲ್ಲಿ ಕಮಾನು, ಮಾರ್ಗಸೂಚಿ ನಿರ್ಮಾಣ ಮಾಡಲಾಗುತ್ತಿದೆ. ಪ್ರಾರಂಭದಲ್ಲಿ ಉದ್ಯಾನ, ಪ್ಯಾರಾಗೋಲ ಕೂಡ ಇರಲಿದೆ ಎಂದು ಸಾಮಾಜಿಕ ಅರಣ್ಯ ವಿಭಾಗದ ಡಿಎಫ್‌ಒ ಮಂಜುನಾಥ ನಾವಿ ತಿಳಿಸಿದ್ದಾರೆ.
.............
ಜಿಪಂ,ತಾಪಂನ ಹಾಗೂ ಗ್ರಾಪಂಗಳ ವಿವಿಧ ಅನುದಾನ ಬಳಸಿ ಸಾಮಾಜಿಕ ಅರಣ್ಯ ವಿಭಾಗದಿಂದ ಭೀಮಕೋಲ ಕೆರೆಯಲ್ಲಿ ಪಂಚವಟಿ ವನ ನಿರ್ಮಾಣ ಮಾಡಲಾಗಿದೆ. ಮುಂದೆ ಬೋಟಿಂಗ್ ಮಾಡಿ ನಿರ್ವಹಣೆಯ ಜವಾಬ್ದಾರಿಯನ್ನು ವಿಎಫ್‌ಸಿಗೆ ವಹಿಸುವ ಯೋಜನೆ ಮಾಡಿಕೊಂಡಿದ್ದೇವೆ.
ಮಂಜುನಾಥ ನಾವಿ
ಡಿಎಫ್‌ಒ ಸಾಮಾಜಿಕ ಅರಣ್ಯ ವಿಭಾಗ ಕಾರವಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net