ಸಾಮಾಜಿಕ ಕಳಕಳಿಯಿಂದ ಜನಪರ ಸೇವೆ ಸಾಧ್ಯ: ದಾವಣಗೆರೆ ಜಿಪಂ ಮುಖ್ಯ ಲೆಕ್ಕಾಧಿಕಾರಿ ಸೌಮ್ಯಶ್ರೀ ಅಭಿಪ್ರಾಯ

291
Published on

ಹರಿಹರ: ಅಧಿಕಾರಿಗಳು ಕರ್ತವ್ಯ ಪ್ರಜ್ಞೆ ಜತೆ ಸಾಮಾಜಿಕ ಕಳಕಳಿ ಹೊಂದಿದ್ದರೆ ಮಾತ್ರ ಜನಪರ, ಸಾರ್ಥಕ ಸೇವೆ ಸಲ್ಲಿಸಲು ಸಾಧ್ಯ ಎಂದು ತಾಪಂ ಆಡಳಿತಾಧಿಕಾರಿ, ಜಿಪಂ ಮುಖ್ಯ ಲೆಕ್ಕಾಧಿಕಾರಿ ಸಿ.ಪಿ. ಸೌಮ್ಯಶ್ರೀ ಅಭಿಪ್ರಾಯಪಟ್ಟರು.

ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಸರ್ಕಾರಿ ಕೆಲಸ ಸಿಗುವುದೇ ಅಪರೂಪ. ಅಂಥದ್ದರಲ್ಲಿ ಸಿಕ್ಕ ಕೆಲಸವನ್ನು ಪ್ರಮಾಣಿಕವಾಗಿ ನಿರ್ವಹಿಸಬೇಕು. ಮೇಲಧಿಕಾರಿಗಳು ನಿಗದಿಸಿದಂತೆ ಯಾಂತ್ರಿಕವಾಗಿ ಗುರಿ ತಲುಪುವ ಕಾಟಾಚಾರದ ಮನಸ್ಥಿತಿ ಇರಬಾರದು. ಮಾನವೀಯ ನೆಲೆಯಲ್ಲಿ ಜನರ ಸೇವೆ ಮಾಡಬೇಕು ಎಂದು ಹೇಳಿದರು.

ಶಿಕ್ಷಣ ಇಲಾಖಾಧಿಕಾರಿಗಳು ಗುಣಮಟ್ಟದ ಶಿಕ್ಷಣ-ಕಲಿಕೆಗೆ ಆದ್ಯತೆ ನೀಡಬೇಕು. ಬಿಇಒಗಳು ಶಾಲೆಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಬೇಕು. ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವಾಗ ಅರ್ಹ ಅಭ್ಯರ್ಥಿಗಳಿಗೆ ಆದ್ಯತೆ ನೀಡಬೇಕು. ಪ್ರಾಮಾಣಿಕತೆ ಮತ್ತು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಶಿಕ್ಷಕರನ್ನು ಪ್ರೇರೇಪಿಸಬೇಕು ಎಂದರು.

ಕೃಷಿ ಅಧಿಕಾರಿಗಳು ತಾಲೂಕಿನ ಎಲ್ಲ ಹಳ್ಳಿಗೆ ತೆರಳಿ, ಮಣ್ಣು ಪರೀಕ್ಷೆ ಮಾಡಿ, ರೈತರು ತಮ್ಮ ಜಮೀನುಗಳಿಗೆ ಯಾವ ಔಷಧ, ಗೊಬ್ಬರ ಹಾಕಬೇಕೆಂದು ಸಲಹೆ ನೀಡಬೇಕು. ರೈತ ಸಂಜೀವಿನಿ ಸೌಕರ್ಯ ಒದಗಿಸಿಕೊಡಬೇಕು. ಅಗತ್ಯ ಬಿತ್ತನೆ ಬೀಜ ಕೊರತೆಯಾಗದಂತೆ ಜಾಗೃತಿ ವಹಿಸಬೇಕು. ಸದಾ ಮೇಲಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಕೃಷಿ ಚಟುವಟಿಕೆಗಳಿಗೆ ವ್ಯತ್ಯಯವಾಗದಂತೆ ಸೌಲಭ್ಯ ದೊರಕಿಸಿಕೊಡಬೇಕೆಂದು ಸೂಚಿಸಿದರು.

ಜನರಿಗೆ ಪಡಿತರ ಕಾರ್ಡ್ ಸೇವೆ ನೀಡುವಲ್ಲಿ ತಾಲೂಕು ಆಡಳಿತ ವಿಫಲವಾಗುತ್ತಿದೆ. ಪ್ರತಿನಿತ್ಯ ಸಾವಿರಾರು ಜನರು ರೇಷನ್ ಕಾರ್ಡ್ ಸೇವೆ ಪಡೆದುಕೊಳ್ಳಲು ಕಚೇರಿಗೆ ಬರುತ್ತಾರೆ. ಆದರೆ, ತಿಂಗಳಲ್ಲಿ ಒಂದು ಗಂಟೆ ಮಾತ್ರ ಈ ಸೇವೆ ನೀಡಲಾಗುತ್ತಿದೆ ಎಂದರೆ ಸಾರ್ವಜನಿಕರ ಪರಿಸ್ಥಿತಿ ಗಂಭೀರವಾಗುತ್ತದೆ. ನಾನು ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.

ಪಾಲಕರನ್ನು ತೊರೆದು ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗದಂತೆ, ಕ್ರಿಯಾಶೀಲರಾಗಿ ಓದಿನಲ್ಲಿ ತೊಡಗುವಂತೆ ಸಮಾಜ ಕಲ್ಯಾಣ, ಬಿಸಿಎಂ ಅಧಿಕಾರಿಗಳು ವಿಶೇಷ ಕಾರ್ಯಕ್ರಮ, ಚಿಂತನ ಶಿಬಿರ ಆಯೋಜಿಸಬೇಕು ಎಂದು ಸೂಚಿಸಿದರು.

ಕ್ಷೇತ್ರದ ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಜನರ ಸಮಸ್ಯೆಗಳಿಗೆ ಗುಣಾತ್ಮಕವಾಗಿ ಸ್ಪಂದಿಸಬೇಕು. ಹಳ್ಳಿಯಿಂದ ಕೆಲಸದ ನಿಮಿತ್ತ ಕಚೇರಿಗೆ ಬರುವವರನ್ನು ಸತಾಯಿಸದೆ ಅವರ ಸಮಸ್ಯೆಗೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕು. ಯಾವುದೇ ತಾರತಮ್ಯ ಇಲ್ಲದೇ ಜನಪರ ಕೆಲಸ ಮಾಡಬೇಕು.ಬಿ.ಪಿ. ಹರೀಶ್, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net