ಚನ್ನಪಟ್ಟಣ: ಅಭಿವೃದ್ಧಿಯಲ್ಲಿ ಮನೋವಿಜ್ಞಾನದ ಪಾತ್ರ ಬಹುಮುಖ್ಯ ಎಂದು ಬಾಂಗ್ಲಾದೇಶದ ಡಾಕಾ ವಿವಿಯ ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಮಹಮ್ಮದ್ ಕಮಲುದ್ದೀನ್ ಅಭಿಪ್ರಾಯಪಟ್ಟರು.
ನಗರದ ಶತಮಾನೋತ್ಸವ ಭವನದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ದೇಶ ಅಭಿವೃದ್ಧಿಯ ಹಾದಿಯಲ್ಲಿದೆ. ಹಲವು ಹೊಸತನಗಳಿಗೆ ನಾವು ಸಾಕ್ಷಿಯಾಗುತ್ತಿದ್ದೇವೆ. ವಿಶ್ವದಲ್ಲಿ ಮತ್ತಷ್ಟು ಹೆಸರುಗಳಿಸಬೇಕಾಗಿದೆ. ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆ ಅಭಿವೃದ್ಧಿ ಪೂರಕವಾಗಿರಬೇಕು. ಈ ಪೂರಕ ಅಭಿವೃದ್ಧಿಯಲ್ಲಿ ಮನೋವಿಜ್ಞಾನ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಸುಸ್ಥಿರ ಅಭಿವೃದ್ಧಿಯಲ್ಲಿ ಹಾಗೂ ಸಾಮಾಜಿಕ ಬೆಳವಣಿಗೆಯಲ್ಲಿ ಮನೋವಿಜ್ಞಾನ ಪರಿಣಾಮಕಾರಿಯಾಗಿ ಪ್ರಭಾವ ಬೀರಿ, ಸಾಮಾಜಿಕ ಬೆಳವಣಿಗೆಯಲ್ಲಿ ಸಂಪರ್ಕದ ಸೇತುವೆಯಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ ಎಂದು ತಿಳಿಸಿದರು.
ಅಭಿವೃದ್ಧಿ ಹೆಸರಿನಲ್ಲಿ ಪರಿಸರ ಹಾಗೂ ಅರಣ್ಯನಾಶ ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆಯಲ್ಲ. ಜಾಗತಿಕ ಮಟ್ಟದಲ್ಲಿ ನಮ್ಮ ಅಭಿವೃದ್ಧಿ ಪರಿಸರ ವಿರುದ್ಧ ಮಟ್ಟದಲ್ಲಿ ಸಾಗುತ್ತಿದೆ. ಪರಿಸರ ಸಂರಕ್ಷಣೆ ಅದರ ನಿರ್ವಹಣೆ ಸರಿಯಾದ ಕ್ರಮದಲ್ಲಿ ಮಾಡದಿದ್ದರೆ ಮುಂದೆ ನಾವು ಅದಕ್ಕೆ ತಕ್ಕದಾದ ಬೆಲೆ ತೆರಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಯುವ ಸಮುದಾಯ ಪರಿಸರ ಉಳಿವಿನ ಬಗ್ಗೆ ಗಮನಹರಿಸಬೇಕು ಎಂದರು.
ಮಾನವ ಸಂಪನ್ಮೂಲ, ಮಾನವ ನಿರ್ವಹಣೆ ಹಾಗೂ ಮಾನವ ಅಭಿವೃದ್ಧಿಗೆ ಮನೋವಿಜ್ಞಾನ ಹಾಗೂ ಮಾನಸಿಕ ಸಧೃಡತೆ ಬಹುಮುಖ್ಯ. ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು ಎಂದು ಕರೆನೀಡಿದರು. ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಹಾಗೂ ಐಕ್ಯೂಸಿ ವಿಭಾಗದ ಸಹಯೋಗದಲ್ಲಿ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಯಶಸ್ವಿಯಾಗಿ ಮುಕ್ತಾಯಗೊಂಡಿತು. ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಭಾಗವಹಿಸಿದ್ದರು.
ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ನಂಜುಂಡ, ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ವಿ ಶಿವಪ್ರಸಾದ್, ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಹರೀಶ್ ಕುಮಾರ್, ಸಸ್ಯಶಾಸ್ತ್ರ ವಿಭಾಗದ ಡಾ. ಉಷಾಮಾಲಿನಿ ಮುಂತಾದವರು ಉಪಸ್ಥಿತರಿದ್ದರು.