

ಬೆಂಗಳೂರು: ಕರ್ನಾಟಕದಲ್ಲಿ ಹಾವು ಕಡಿತದ ಪ್ರಕರಣಗಳು ಮತ್ತು ಸಾವುಗಳನ್ನು ಅಧಿಸೂಚಿತ ರೋಗಗಳು ಎಂದು ಘೋಷಿಸಿರುವ ರಾಜ್ಯ ಸರ್ಕಾರ ಹಾವು ಕಡಿತ ತಡೆಗಟ್ಟುವಿಕೆಗೆ ಕ್ರಿಯಾ ಯೋಜನೆ ರೂಪಿಸಲು ಮುಂದಾಗಿದೆ.
ಈ ಸಂಬಂಧ ನಗರದ ಆರೋಗ್ಯ ಸೌಧದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಬುಧವಾರ ನಡೆದ ಕಾರ್ಯಾಗಾರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. ಈ ವೇಳೆ ರಾಜ್ಯದಲ್ಲಿ ಹಾವು ಕಡಿತ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು.
ಹಾವು ಕಡಿತ ನಿರ್ಲಕ್ಷಿಸಲ್ಪಟ್ಟ ಉಷ್ಣವಲಯದ ಕಾಯಿಲೆಯಾಗಿದೆ (ಎನ್‌ಟಿಡಿ). ಇದು ಪ್ರಪಂಚದಾದ್ಯಂತ ಗಮನಾರ್ಹವಾದ ಅಂಗವೈಕಲ್ಯ, ಅಸ್ವಸ್ಥತೆ ಮತ್ತು ಮರಣಕ್ಕೆ ಕಾರಣವಾಗಿದೆ. ಇದನ್ನು ತಡೆಯಲು ‘ಒನ್ ಹೆಲ್ತ್’ ಹೆಸರಿನಲ್ಲಿ ಆರೋಗ್ಯ ಇಲಾಖೆ, ಅರಣ್ಯ ಇಲಾಖೆ ಸೇರಿ ವಿವಿಧ ಇಲಾಖೆಗಳನ್ನು ಒಳಗೊಂಡು ಕಾರ್ಯನಿರ್ವಹಿಸುವ ಅಗತ್ಯತೆ ಕುರಿತು ವಿವರಿಸಿದ ಸಚಿವರು, ರಾಜ್ಯದಲ್ಲಿ ಹಾವು ಕಡಿತದಿಂದ ಎದುರಾಗುವ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ನಿಟ್ಟಿನಲ್ಲಿ ಕ್ರಿಯಾ ಯೋಜನೆ ರೂಪಿಸುವ ಅಗತ್ಯತೆ ಕುರಿತು ಹೇಳಿದರು.
ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳು, ತಾಲ್ಲೂಕು ಆಸ್ಪತ್ರೆಗಳು ಹಾಗೂ ಆಯ್ದ ಸಮುದಾಯ ಆರೋಗ್ಯ ಕೇಂದ್ರಗಳನ್ನು ಹಾವು ಕಡಿತ ಚಿಕಿತ್ಸಾ ಕೇಂದ್ರಗಳನ್ನಾಗಿ ಗುರುತಿಸಿ ಚಿಕಿತ್ಸೆಗಾಗಿ ಮಾರ್ಗಸೂಚಿ ಪ್ರಕಟಿಸಿದ್ದು, ಹಾವಿನ ನಂಜಿನ ಲಕ್ಷಣ ಕಂಡುಬಂದಲ್ಲಿ ತಕ್ಷಣ ರೋಗಿಯ ಅಥವಾ ಸಂಬಂಧಿಕರ ಒಪ್ಪಿಗೆ ಪತ್ರ ಪಡೆದು, ಕಡ್ಡಾಯವಾಗಿ ‘ಆ್ಯಂಟಿ ಸ್ನೇಕ್ ವೆನಮ್’ ಅನ್ನು ಉಚಿತವಾಗಿ ನೀಡುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.
66 ಜಾತಿಯ ಹಾವುಗಳ ವಿಷಕಾರಿ: ಜಾಗತಿಕವಾಗಿ ಸರಿಸುಮಾರು ಎರಡು ಸಾವಿರ ಜಾತಿಯ ಹಾವುಗಳಿದ್ದು, ಭಾರತದಲ್ಲಿ 310 ಜಾತಿಗಳ ಹಾವುಗಳು ಕಂಡು ಬಂದಿವೆ. ಇವುಗಳಲ್ಲಿ 66 ಜಾತಿಯ ಹಾವುಗಳ ವಿಷಕಾರಿ ಮತ್ತು ಮಾನವನ ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟು ಮಾಡುವಂತಹವಾಗಿವೆ. ಈ ವಿಷಕಾರಿ ಪ್ರಭೇದಗಳಲ್ಲಿ ಇಂಡಿಯನ್ ಕೋಬ್ರಾ, ಕಾಮನ್ ಕ್ರೈಟ್, ರಸೆಲ್ಸ್ ವೈಪರ್ ಮತ್ತು ಸಾ-ಸ್ಕೇಲ್ಡ್ ವೈಪರ್ ಸೇರಿವೆ. ಕರ್ನಾಟಕದಲ್ಲೂ ಹಲವಾರು ಪ್ರದೇಶಗಳಲ್ಲಿ ನಿರ್ದಿಷ್ಟ ವಿಷಕಾರಿ ಹಾವುಗಳು ವಾಸಿಸುತ್ತಿದ್ದು, ಅವುಗಳಲ್ಲಿ ಕಿಂಗ್ ಕೋಬ್ರಾ, ಮಲಬಾರ್ ಪಿಟ್ ವೈಪರ್ ಮತ್ತು ಹಂಪ್ ನೋಸ್ಡ್ ಪಿಟ್ ವೈಪರ್ ಸೇರಿವೆ ಎಂದು ಅಂಕಿ ಅಂಶಗಳ ಸಹಿತ ಅಧಿಕಾರಿಗಳು ವಿವರಿಸಿದರು.