ಹೆದ್ದಾರಿ ಸುಂಕ ತಪ್ಪಿಸಲು ಕಳ್ಳಾಟ

SRP_11-02jpj
Published on

ಶ್ರೀರಂಗಪಟ್ಟಣ: ತಾಲೂಕಿನ ಬೆಂಗಳೂರು-ಮೈಸೂರು ರಾಷ್ಟ್ರೀಯ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ 3 ರಾಜ್ಯ ಸಾರಿಗೆ ಸಂಸ್ಥೆ ಬಸ್ ಸೇರಿದಂತೆ 17 ಖಾಸಗಿ ವಾಹನಗಳ ಮೇಲೆ ಪ್ರಕರಣ ದಾಖಲಾಗಿದೆ. ಇದೀಗ ಸಂಬಂಧಪಟ್ಟ ವಾಹನ ಸವಾರರ ಲೈಸೆನ್ಸ್ ರದ್ದುಪಡಿಸಲು ಆರ್‌ಟಿಒಗೆ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಪತ್ರ ಬರೆದಿದ್ದಾರೆ.


ಎಕ್ಸ್‌ಪ್ರೆಸ್ ರಸ್ತೆಯಲ್ಲಿ ಹೆಚ್ಚಾಗುತ್ತಿರುವ ಅಪಘಾತಗಳನ್ನು ತಡೆಯುವ ಸಲುವಾಗಿ ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡು ವೇಗ ನಿಯಂತ್ರಣ ಹಾಗೂ ಅವೈಜ್ಞಾನಿಕ ಸಂಚಾರಕ್ಕೆ ಕಡಿವಾಣ ಹಾಕಿದ್ದರೂ ಮೇಲಿಂದ ಮೇಲೆ ಉಂಟಾಗುತ್ತಿರುವ ಸಮಸ್ಯೆಗಳನ್ನು ನಿಯಂತ್ರಿಸಲು ಇದೀಗ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.


ಕೆಲ ವಾಹನ ಸವಾರರು ಗಣಂಗೂರು ಗ್ರಾಮದ ಟೋಲ್ ಪ್ಲಾಜಾ ಕೇಂದ್ರದ ಸಮೀಪದವರೆಗೂ ಸಂಚರಿಸಿ ನಂತರ ಬೆಂ-ಮೈ ಹೆದ್ದಾರಿಗೆ ಸುಂಕ ಪಾವತಿಸುವುದನ್ನು ತಪ್ಪಿಸುವ ಸಲುವಾಗಿ ಪುನಃ 4 ಕಿ.ಮೀ. ದೂರ ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸಿ ಸರ್ವೀಸ್ ರಸ್ತೆವರೆಗೂ ಆಗಮಿಸಲು ಯತ್ನಿಸುತ್ತಿದ್ದು, ಇಂತಹ ಘಟನೆಗಳು ಹೆದ್ದಾರಿಯುದ್ದಕ್ಕೂ ಅಳವಡಿಸಿರುವ ಸಿಸಿಟಿವಿ ಕ್ಯಾಮರಾ ಹಾಗೂ ಇತರ ವಾಹನ ಸವಾರರು ಚಿತ್ರೀಕರಿಸಿ ಸೆರೆ ಹಿಡಿದಿರುವ ವಿಡಿಯೋ ಚಿತ್ರಣಗಳಲ್ಲಿ ಸಿಕ್ಕಿಬಿದ್ದಿದ್ದಾರೆ.


ಇದರೊಂದಿಗೆ ಸರ್ವೀಸ್ ರಸ್ತೆಯಲ್ಲಿ ಸಂಚರಿಸಿ ಟೋಲ್ ಪ್ಲಾಜಾದಲ್ಲಿ ಹಣ ಪಾವತಿ ತಪ್ಪಿಸಿದ ಬಳಿಕವೂ ಪುನಃ ಎಕ್ಸ್‌ಪ್ರೆಸ್ ಹೆದ್ದಾರಿಗೆ ಮರಳಿ ಹಿಂತಿರುಗಲು ಸರ್ವೀಸ್ ರಸ್ತೆಗೆ ಹೊರಬರಲು ಸಂಪರ್ಕ ಕಲ್ಪಿಸಿರುವ ಏಕಮುಖ ದಾರಿಯಲ್ಲಿ ಹಿಮ್ಮುಖವಾಗಿ ಅಡ್ಡಾದಿಡ್ಡಿ ವಾಹನ ನುಗ್ಗಿಸುವ ಮೂಲಕ ಟ್ರಾಫಿಕ್ ದಟ್ಟಣೆ ಹಾಗೂ ವಿವಿಧ ರೀತಿಯ ಅಪಘಾತಗಳಿಗೆ ಕಾರಣವಾಗಿರುವ ವಾಹನಗಳ ನಂಬರ್‌ಗಳನ್ನೂ ಸೆರೆ ಹಿಡಿದು ಇದೀಗ ಪ್ರಕರಣ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.


ನಿಯಮ ಉಲ್ಲಂಘಿಸಿದ ವಾಹನಗಳ ನಂಬರ್ ಆಧರಿಸಿ ಐಪಿಸಿ ಕಲಂ 279 ಅಡಿಯಲ್ಲಿ ಅಜಾಗರೂಕ ಚಾಲನೆ ಮಾಡಿ ಮತ್ತೊಬ್ಬರ ಪ್ರಾಣಕ್ಕೆ ಕಂಟಕ ತರುವ ಕಾರಣದಡಿ ಪ್ರಕರಣ ದಾಖಲಿಸುವ ಹಾಗೂ ವಾಹನವನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳುವ ಜತೆಗೆ ಆರ್‌ಟಿಒಗೆ ಪತ್ರ ಬರೆದು ಸಂಬಂಧಿಸಿದ ಚಾಲಕನ ಲೈಸೆನ್ಸ್ ಅಮಾನತುಗೊಳಿಸಲು ಮನವಿ ಮಾಡಿದ್ದಾರೆ.


ರಾಜ್ಯ ಸಾರಿಗೆ ಸಂಸ್ಥೆಯ 3 ಬಸ್ಸಿನ ಚಾಲಕರು ಸಹ ಇಂತಹದೇ ನಿಯಮ ಉಲ್ಲಂಘನೆಯಲ್ಲಿ ಪತ್ತೆಯಾಗಿದ್ದು, ಇಂತಹ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರಿಗೆ ಸಂಸ್ಥೆಗೂ ಪತ್ರ ಬರೆದಿದ್ದಾರೆ.


ಒಟ್ಟಿನಲ್ಲಿ ದಿನೇದಿನೆ ಹೆಚ್ಚುತ್ತಿರುವ ವಾಹನಗಳ ಅಪಘಾತ ಪ್ರಕರಣಗಳಿಂದ ತಲೆನೋವಾಗಿ ಪರಿಣಮಿಸಿದ್ದ ಸಮಸ್ಯೆಗೆ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಕಠಿಣ ಕಾನೂನು ಕ್ರಮಗಳನ್ನು ಜಾರಿಗೊಳಿಸುವ ಮೂಲಕ ನಿಯಂತ್ರಣಕ್ಕೆ ಮುಂದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net