ಸಂಕಷ್ಟದ ನಡುವೆಯೂ ಜನಪರ ಆಡಳಿತ ನಡೆಸಿದ ಎಸ್‌ಎಂಕೆ

ಸಂಕಷ್ಟದ ನಡುವೆಯೂ ಜನಪರ ಆಡಳಿತ ನಡೆಸಿದ ಎಸ್‌ಎಂಕೆ
Published on

ಅರಕಲಗೂಡು: ರಾಜ್ಯದಲ್ಲಿ ಎದುರಾದ ಸಾಕಷ್ಟು ಸಂಕಷ್ಟಗಳ ನಡುವೆಯೂ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದ ಧೀಮಂತ ನಾಯಕರಾಗಿದ್ದರು ಎಂದು ತಾಲೂಕು ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಹಾಗೂ ಪ.ಪಂ ಸದಸ್ಯೆ ಎಚ್.ಎಸ್.ರಶ್ಮಿ ಹೇಳಿದರು.

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನಿಧನಕ್ಕೆ ಪಟ್ಟಣದ ಅನಕೃ ವೃತ್ತದಲ್ಲಿ ಮಂಗಳವಾರ ರಾತ್ರಿ ವಿವಿಧ ಸಂಘಟನೆಗಳು ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಬೆಂಗಳೂರನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಕೀರ್ತಿ ಇವರದ್ದಾಗಿದೆ. ಸತತ ಬರಗಾಲ, ವರನಟ ರಾಜ್‌ಕುಮಾರ್ ಅವರ ಅಪಹರಣ, ಕಾವೇರಿ ಸಮಸ್ಯೆಗಳ ನಡುವೆಯೂ ಸರ್ಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಯಶಸ್ವಿನಿ, ಸ್ತ್ರೀ ಶಕ್ತಿ ಯೋಜನೆ, ಬೆಂಗಳೂರಿಗೆ ಮೆಟ್ರೋ ವ್ಯವಸ್ಥೆ ಸೇರಿದಂತೆ ಹಲವು ಜನಪರ ಯೋಜನೆ ಜಾರಿಗೆ ತಂದಿದ್ದರು. ಇವರ ಆದರ್ಶಗಳು ಇಂದಿನ ರಾಜಕಾರಣಿಗಳಿಗೆ ಅನುಕರಣೀಯವಾಗಿದೆ ಎಂದು ಸ್ಮರಿಸಿದರು.

ತಾಲೂಕು ರೈತ ಸಂಘದ ಕಾರ್ಯಾಧ್ಯಕ್ಷ ಭುವನೇಶ್, ಜಿಲ್ಲಾ ವೀರ ಶೈವ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮಾತನಾಡಿ, ಎಸ್.ಎಂ.ಕೃಷ್ಣ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದರು. ಪ.ಪಂ. ಸದಸ್ಯ ರಮೇಶ್ ವಾಟಾಳ್, ಮುಖಂಡ ಮಂಜುಶೆಟ್ಟಿಗೌಡ, ಲೋಕೇಶ್, ಪ್ರವೀಣ್, ಮಂಜು, ಮೂಡ್ಲಿಗೌಡ, ಎಂ.ರಘು, ಗ್ಯಾಸ್ ಚಂದ್ರು, ಶ್ರೀನಿವಾಸ್, ನಾಗೇಶ್, ಧರ್ಮೇಗೌಡ, ಅನ್ಸರ್ ಅಹಮದ್, ನಾಗೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net