ರಾಜಕೀಯ ದಿಗ್ಗಜನಿಗೆ ಗೌರವ ನಮನ

cccc
Published on

ಚನ್ನಪಟ್ಟಣ: ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರಕ್ಕೆ ಬೊಂಬೆನಾಡಿನ ಜನತೆ ಭಾವಪೂರ್ಣ ಅಂತಿಮ ನಮನ ಸಲ್ಲಿಸಿದರು.

ತಾಲೂಕಿನ ಕೆಂಗಲ್ನಿಂದ ಹಿಡಿದು ಗಡಿಭಾಗವಾದ ಕೋಲೂರು ಗ್ರಾಮದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ನಿಂತ ಜನತೆ ರಾಜಕೀಯ ದಿಗ್ಗಜನಿಗೆ ಗೌರವ ನಮನ ಸಲ್ಲಿಸಿದರು. ಚನ್ನಪಟ್ಟಣ ನಗರ ಹಾಗೂ ಗ್ರಾಮೀಣ ಭಾಗದ ಜನತೆ ಕಿಕ್ಕಿರಿದು ನೆರೆದಿದ್ದು, ಬೆಂ-ಮೈ ಹೆದ್ದಾರಿಯ ಎರಡು ಬದಿಗಳಲ್ಲಿ ನಿಂತು ಪುಷ್ಪಾರ್ಚನೆ ಮಾಡಿದರು. ಪಕ್ಷಾತೀತವಾಗಿ ಹಲವಾರು ಮುಖಂಡರು, ಪಾಲಕರು ಪುಟಾಣಿ ಮಕ್ಕಳನ್ನು ಕರೆತಂದು ಅಂತಿಮ ದರ್ಶನ ಮಾಡಿಸುತ್ತಿದದ್ದು ಕಂಡುಬಂತು.

ನಗರದ ಅಂಬೇಡ್ಕರ್ ಪುತ್ಥಳಿ ಸಮೀಪ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ವತಿಯಿಂದ ಗಣ್ಯರು ಹಾಗೂ ಸಾರ್ವಜನಿಕರು ಅಂತಿಮ ದರ್ಶನ ಪಡೆಯಲು ಸ್ಥಳಾವಕಾಶ ಮಾಡಿಕೊಡಲಾಗಿತ್ತು. ಶಾಸಕ ಸಿ.ಪಿ.ಯೋಗೇಶ್ವರ್, ಮಾಜಿ ಸಚಿವ ಸಾ.ರಾ.ಮಹೇಶ್, ಮಾಜಿ ಶಾಸಕ ಮೈಸೂರು ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಬಿಎಂಐಸಿಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ, ಮಾಜಿ ಶಾಸಕ ಎಂ.ಸಿ.ಅಶ್ವತ್ಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ತಾಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು, ಜೆಡಿಎಸ್ ನಗರಾಧ್ಯಕ್ಷ ಅಜಯ್, ಮುಖಂಡರಾದ ರವೀಶ್, ಮುದ್ದುಕೃಷ್ಣ, ಗೋವಿಂದನಹಳ್ಳಿ ನಾಗರಾಜು ಸೇರಿ ವಿವಿಧ ಪಕ್ಷಗಳ ಮುಖಂಡರು ದರ್ಶನ ಪಡೆದರು.

ಕರ್ನಾಟಕ ರಕ್ಷಣಾ ವೇದಿಕೆ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ, ರಾಜ್ಯ ರೈತ ಸಂಘ ಸೇರಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ವಿವಿಧ ಸಮಾಜದ ಮುಖಂಡರು ಗೌರವ ನಮನ ಸಲ್ಲಿಸಿದರು.

ಜೇಬುಗಳ್ಳರ ಕೈಚಳಕ  ಎಸ್.ಎಂ.ಕೃಷ್ಣರ ಅಂತಿಮ ದರ್ಶನ ಪಡೆಯಲು ನಗರದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಜೇಬುಗಳ್ಳರು ಕೈಚಳಕ ತೋರಿದ್ದು ಕಂಡುಬಂತು. ಸ್ಥಳದಲ್ಲಿ ಏಳಕ್ಕೂ ಹೆಚ್ಚು ಮಂದಿಯ ಜೇಬಿಗೆ ಕಳ್ಳರು ಕನ್ನ ಹಾಕಿದರು. ಹಲವರ ಜೇಬುಗಳಿಗೆ ಕತ್ತರಿ ಹಾಕಿದ ಕಳ್ಳರು ಲಕ್ಷಾಂತರ ಹಣ ಹಾಗೂ ಬೆಲೆ ಬಾಳುವ ಮೊಬೈಲ್ ಎಗರಿಸಿದ್ದಾರೆ. ಈ ವೇಳೆ ವ್ಯಕ್ತಿಯೊರ್ವನ ಜೇಬಿಗೆ ಕೈ ಹಾಕಿದ ಕಳ್ಳನೊರ್ವ ಸಿಕ್ಕಿಬಿದ್ದದ್ದಾನೆ. ಆತನನ್ನು ಹಿಡಿದು ಧರ್ಮದೇಟು ನೀಡಿದ ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದರು. ಈ ವೇಳೆ ಹಣ ಹೋಗಿರುವ ವಿಚಾರ ತಿಳಿದ ಹಲವರು ಪೊಲೀಸ್ ಠಾಣೆಗೆ ಬಂದು ಅವಲತ್ತುಕೊಂಡರು. ಈ ಸಂಬಂಧ ಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net