

ತಿ.ನರಸೀಪುರ: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿಯೂ ಗುಣಮಟ್ಟದ ಸ್ಮಾರ್ಟ್ ಶಿಕ್ಷಣ ನೀಡಿದರೆ ಹಳ್ಳಿಗಾಡಿನ ಮಕ್ಕಳು ಜಾಗತಿಕ ಮಟ್ಟದಲ್ಲಿಯೂ ಪ್ರತಿಭಾನ್ವಿತರಾಗಿ ಬೆಳೆಯಬಲ್ಲರು ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಇತ್ತೀಚೆಗೆ ತಾಲೂಕಿನ ಮುತ್ತತ್ತಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 13.90 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸ್ಮಾರ್ಟ್ ಕ್ಲಾಸ್ ಕೊಠಡಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣಕ್ಕೆ ಹೊಸ ಚೈತನ್ಯ ನೀಡಬೇಕಿದೆ. ಹಳ್ಳಿಯ ಮಕ್ಕಳಿಗೆ ಸ್ಮಾರ್ಟ್ ಶಿಕ್ಷಣ ನೀಡುವ ಉದ್ದೇಶದಿಂದ ಸರ್ಕಾರಿ ಶಾಲೆಗಳನ್ನು ಸ್ಮಾರ್ಟ್ ಕ್ಲಾಸ್ ಗಳನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದರು.
ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವ ಸ್ಮಾರ್ಟ್ ಕ್ಲಾಸ್ ನಿಂದಾಗಿ ಸಾವಿರಾರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ದಾನಿಗಳು, ವಿವಿಧ ಸಂಸ್ಥೆಗಳ ಸಹಭಾಗಿತ್ವ ಪಡೆದು ಇಂತಹ ಶೈಕ್ಷಣಿಕ ಸೌಲಭ್ಯಗಳನ್ನು ಈ ಹಳ್ಳಿಯ ಮಕ್ಕಳಿಗೆ ನೀಡುವ ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸಬೇಕಿದೆ. ಮುಖ್ಯ ಮಂತ್ರಿಗಳ ವಿಶೇಷ ಅನುದಾನದಡಿ ಶಾಲೆಯ ಕಟ್ಟಡ ನಿರ್ಮಾಣವಾಗಿದ್ದು, ಐಟಿಸಿ ಕಂಪನಿಯು 80 ಸಾವಿರ ರೂ.ವೆಚ್ಚದ ಕಂಪ್ಯೂಟರ್ ಅನ್ನು ಶಾಲೆಗೆ ಕೊಡುಗೆಯಾಗಿ ನೀಡಿದ್ದು, ಮಕ್ಕಳು ಇದರ ಸದುಪಯೋಗ ಪಡೆದು ತಮ್ಮ ಶಿಕ್ಷಣ ಮಟ್ಟವನ್ನು ಉತ್ತಮ ಪಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಯತೀಂದ್ರ ಸಿದ್ದರಾಮಯ್ಯ ಸಲಹೆ ನೀಡಿದರು.
ಇದೇ ವೇಳೆ ಗ್ರಾಮಸ್ಥರು ವಿವಿಧ ಸಮಸ್ಯೆಗಳ ಕುರಿತಂತೆ ಶಾಸಕರಿಗೆ ಅಹವಾಲು ಸಲ್ಲಿಸಿದರು. ಜಿ.ಪಂ ಮಾಜಿ ಸದಸ್ಯ ಕೆ.ಮಹದೇವ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ಮಹದೇವಣ್ಣ, ನಿರ್ದೇಶಕ ಎನ್.ಅನಿಲ್ ಕುಮಾರ್, ತುಂಬಲ ಗ್ರಾಪಂ ಅಧ್ಯಕ್ಷ ರಾಮನಂಜಯ್ಯ, ಪಿಡಿಒ ಧನಂಜಯ, ಸದಸ್ಯ ಕಂಬಯ್ಯ, ತುಂಬಲ ಮಂಜುನಾಥ್, ಅಂದಾನಿ, ಗುರುರಾಜ್, ಹಾಳೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ರಮೇಶ್ ಮುದ್ದೇಗೌಡ, ಕುರುಬರ ಸಂಘದ ಅಧ್ಯಕ್ಷ ಎಂ.ಎಸ್.ಮಹದೇವಸ್ವಾಮಿ, ಮಾಜಿ ಅಧ್ಯಕ್ಷ ಟಿ.ಎಸ್.ಪ್ರಶಾಂತ್ ಬಾಬು, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಪ್ರಕಾಶ್, ಸದಸ್ಯರಾದ ಎನ್. ಸೋಮು, ಸೈಯದ್ ಅಹಮದ್, ಮುದ್ದಬೀರನಹುಂಡಿ ಗುರುಸ್ವಾಮಿ, ಕೆ.ಗಣೇಶ್, ಎಂ.ಮಿಥುನ್, ತಹಶೀಲ್ದಾರ್ ಸುರೇಶಾಚಾರ್, ಕಾರ್ಯನಿರ್ವಾಹಕ ಅಧಿಕಾರಿ ಪಿ.ಎಸ್.ಅನಂತರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ, ಮುಖ್ಯ ಶಿಕ್ಷಕ ಮಹೇಶ್, ಪೋಲಿಸ್ ಇನ್ಸ್ಪೆಕ್ಟರ್ ಧನಂಜಯ, ಹಿಂ.ವರ್ಗಗಳ ರಾಜ್ಯ ಕಾರ್ಯದರ್ಶಿ ಎಂ.ರಮೇಶ್, ಗ್ರಾ.ಪಂ ಮಾಜಿ ಸದಸ್ಯ ಹೇಮಂತ್, ರಜತ್ ಸ್ವಾಮಿ, ಗೋಪಾಲರಾಜು ಸೇರಿದಂತೆ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಇದ್ದರು.