ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಚಿಕ್ಕ ಜಾತ್ರೆ

25-JULY-GPT-1
Published on

ಗುಂಡ್ಲುಪೇಟೆ: ತಾಲೂಕಿನ ಹುಲಿಗಿನಮುರಡಿ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಜುಲೈ 26ರ ಮೊದಲನೇ ಶ್ರಾವಣ ಶನಿವಾರದಂದು ಚಿಕ್ಕ ಜಾತ್ರೆ ನಡೆಯಲಿದ್ದು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಚಿಕ್ಕ ತಿರುಪತಿ ಎಂದೇ ಕರೆಯಲಾಗುವ ಈ ದೇವಾಲಯದಲ್ಲಿ ಮಕರ ಸಂಕ್ರಾಂತಿಯಂದು ದೊಡ್ಡಜಾತ್ರೆ ನಡೆದರೆ, ಶ್ರಾವಣ ಮಾಸದ ಮೊದಲ ಶನಿವಾರ ಚಿಕ್ಕಜಾತ್ರೆ ನಡೆಯಲಿದೆ. ಈ ಅಂಗವಾಗಿ ಕಳೆದ ಮೂರು ದಿನಗಳಿಂದ ದೇವಾಲಯವನ್ನು ಸುಣ್ಣಬಣ್ಣಗಳಿಂದ ಶುಚಿಗೊಳಿಸಿ ರಥವನ್ನು ಸಜ್ಜುಗೊಳಿಸಲಾಗಿದೆ.

ಬುಧವಾರ ದೇವರಿಗೆ ಅಭಿಷೇಕ, ಅಂಕುರಾರ್ಪಣ, ಗುರುವಾರ ಪ್ರಾತಃಕಾಲ ಧ್ವಜಾರೋಹಣ, ಸಂಜೆ ಭೇರಿ ತಾಡನ, ಯಾಗಶಾಲಾ ಪ್ರವೇಶ, ಶುಕ್ರವಾರ ನಿತ್ಯಾರ್ಚನೆ ಹಾಗೂ ಕಲ್ಯಾಣೋತ್ಸವ ನಡೆಸಲಾಗಿದೆ. ಶನಿವಾರ ಮಧ್ಯಾಹ್ನ 12 ಗಂಟೆಗೆ ಉತ್ಸವ ಮೂರ್ತಿಗಳನ್ನು ಭವ್ಯ ರಥದಲ್ಲಿರಿಸಿ ದೇವಾಲಯದ ಸುತ್ತಲೂ ಪ್ರದಕ್ಷಿಣೆ ಮಾಡಿಸುವ ಮೂಲಕ ರಥೋತ್ಸವ ನಡೆಸಲಾಗುತ್ತದೆ.

ಸುಗಮ ಸಂಚಾರ ನಿರ್ವಹಣೆಗೆ ಪೊಲೀಸ್ ಇಲಾಖೆ ಮುಂದಾಗಿದ್ದು ದ್ವಿಚಕ್ರ ವಾಹನಗಳ ನಿಲುಗಡೆಗೆ ಬೆಟ್ಟದ ತಪ್ಪಲಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿದೆ. ದೇವಾಲಯಕ್ಕೆ ಬರುವ ಭಕ್ತರು ತಮ್ಮ ವಾಹನಗಳನ್ನು ಇಲ್ಲಿ ನಿಲ್ಲಿಸಿ ಸಾರಿಗೆ ಬಸ್ಸುಗಳಲ್ಲಿ ದೇವಾಲಯಕ್ಕೆ ಹೋಗಬಹುದು. ಭಕ್ತರ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆಯು ಪಟ್ಟಣದ ನಿಲ್ದಾಣ ಹಾಗೂ ತೆರಕಣಾಂಬಿಯಿಂದ 10 ಬಸ್ಸುಗಳನ್ನು ನಿಯೋಜಿಸಿದೆ ಎಂದು ತೆರಕಣಾಂಬಿ ಸಬ್‌ಇನ್ಸ್‌ಪೆಕ್ಟರ್ ಕೆ.ಎಂ.ಮಹೇಶ್ ತಿಳಿಸಿದ್ದಾರೆ.

ಸೂಚನೆ: ರಥೋತ್ಸವದಂದು ಪ್ರಸಾದ ವಿತರಿಸುವ ಭಕ್ತರು ತಮ್ಮ ವಿಳಾಸದೊಂದಿಗೆ ಪೂರ್ವಭಾವಿಯಾಗಿ ತಹಸೀಲ್ದಾರ್ ಅವರಿಂದ ಅನುಮತಿ ಪಡೆದುಕೊಳ್ಳುವುದು ಕಡ್ದಾಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net