ರಾಜಕೀಯದಿಂದ ನಿವೃತ್ತನಾಗಿದ್ದೇನೆ; ಇದನ್ನು ಹೈಕಮಾಂಡ್‌ಗೆ ತಿಳಿಸಿದರೆ ಪಿಂಚಣಿ ಕೊಡ್ತಾರಾ?: ಎಸ್.ಎಂ. ಕೃಷ್ಣ ಪ್ರಶ್ನೆ

S M Krishna
Published on

ಬೆಂಗಳೂರು: ಕೆಲವು ವರ್ಷಗಳಿಂದ ಬಿಜೆಪಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಎಸ್.ಎಂ. ಕೃಷ್ಣ ಅವರು ತಮ್ಮ ರಾಜಕೀಯ ನಿವೃತ್ತಿಯ ಕುರಿತು ಇಂದು ಲಘುಧಾಟಿಯಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿದರು. ‘‘ನಿಮ್ಮನ್ನು ಪಕ್ಷದಲ್ಲಿ ಕಡೆಗಣಿಸಿದಂತಾಗಿದೆಯಲ್ಲ, ನೀವು ರಾಜಕೀಯ ನಿವೃತ್ತಿ ಪಡೆದಿದ್ದೀರಾ?’’ ಎಂಬ ವರದಿಗಾರರ ಪ್ರಶ್ನೆಗೆ, ‘‘ನಾನು ರಾಜಕೀಯದಿಂದ ದೂರ ಉಳಿದು ಈಗಾಗಲೇ ಹಲವಾರು ದಿನಗಳು ಕಳೆದಿವೆ. ರಾಜಕೀಯದಿಂದ ನಾನು ನಿವೃತ್ತಿ ಪಡೆಯುತ್ತಿದ್ದೇನೆ. ಈ ವಿಷಯವನ್ನು ಪಕ್ಷದ ಹೈಕಮಾಂಡ್ ಗಮನಕ್ಕೆ ತರುವ ಅವಶ್ಯಕತೆ ಇಲ್ಲ. ಅವರ ಗಮನಕ್ಕೆ ತಂದರೆ ಅವರೇನು ನನಗೆ ಪಿಂಚಣಿ ಕೊಡುತ್ತಾರೆಯೇ? ಆರೋಗ್ಯದ ಕಾರಣಗಳಿಗಾಗಿ ನಾನೇ ಪಕ್ಷದ ಚಟುವಟಿಕೆಗಳಿಂದ ದೂರವಿದ್ದೇನೆ. ಹಾಗಾಗಿ ಪಕ್ಷ ನನ್ನನ್ನು ಕಡೆಗಣಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’’ ಎಂದರು.

‘‘ನನಗೆ ಈಗಾಗಲೇ 90 ವರ್ಷ ವಯಸ್ಸಾಗಿದೆ. 50 ವರ್ಷ ವಯಸ್ಸಾದವನಂತೆ ನಟಿಸಲು ನಾನು ಸಿದ್ಧನಿಲ್ಲ. ವಯಸ್ಸನ್ನು ಪರಿಗಣಿಸಿ ನಾನು ರಾಜಕೀಯದಿಂದ ದೂರ ಸರಿಯುತ್ತಿದ್ದೇನೆ’’ ಎಂದು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net