

ಸುಳ್ಯ: ನಗರ ಪಂಚಾಯಿತಿಯಿಂದ ಸರಬರಾಜು ಮಾಡಲಾಗುತ್ತಿರುವ ನೀರು ಕೆಸರು ತುಂಬಿದ ಕೆಂಪು ಬಣ್ಣದಿಂದ ಕೂಡಿದ್ದು ಕುಡಿಯಲು ಯೋಗ್ಯವಾಗಿಲ್ಲ ಎಂಬ ದೂರು ನಗರದ ಬೂಡು ವಾರ್ಡ್‌ನಿಂದ ಕೇಳಿ ಬಂದಿದೆ.
ಮೊದಲೇ ಈ ಬಗ್ಗೆ ದೂರುಗಳು ಕೇಳಿ ಬಂದಿದ್ದರೂ, ಮಳೆಗಾಲ ಪ್ರಾರಂಭವಾದ ಬಳಿಕ ಕಲುಶಿತ ನೀರು ಪೂರೈಕೆ ಕುರಿತ ದೂರುಗಳು ಹೆಚ್ಚಾಗಿವೆ. ಈಬಗ್ಗೆ ನಗರ ಪಂಚಾಯಿತಿ ಅಧಿಕಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಮಳೆಗಾಲ ಆರಂಭಗೊಂಡ ಬಳಿಕ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶುಚಿಗೊಳಿಸಿದ ನೀರನ್ನೇ ಸರಬರಾಜು ಮಾಡಬೇಕೆಂದು ಜನರು ಆಗ್ರಹಿಸಿದ್ದಾರೆ.