

ಬೆಂಗಳೂರು: ಚರ್ಮದ ಆರೈಕೆಗಾಗಿ ಜನ ಜಾಗೃತಿ ಮತ್ತು ನಕಲಿ ವೈದ್ಯರ ಬಗ್ಗೆ ಎಚ್ಚರಿಕೆ ವಹಿಸುವಂತೆ ತಿಳಿವಳಿಕೆ ನೀಡಲು ಮಾ. 2 ರಂದು ನಗರದಲ್ಲಿ ಇದೇ ಮೊದಲ ಬಾರಿಗೆ ಚರ್ಮದ ಆರೈಕೆಗಾಗಿ ಚರ್ಮರೋಗ ತಜ್ಞರಿಂದ ಬೃಹತ್ ‘ಸ್ಕಿನ್ನಥಾನ್‘ ಓಟ ಆಯೋಜಿಸಲಾಗಿದೆ.
ಬೆಂಗಳೂರು ಚರ್ಮ ರೋಗ ವೈದ್ಯರ ಸಂಘ, ಎಐಡಿವಿಎಲ್ ಕರ್ನಾಟಕ ಸಂಘ, ಇಂಡಿಯನ್ ಅಸೋಸಿಯೇಷನ್ ಆ್ ಡರ್ಮಟಾಲಜಿಸ್ಟ್, ವೆನರಿಯಾಲಜಿಸ್ಟ್ ಸಂಸ್ಥೆಗಳ ಸಹಯೋಗದಲ್ಲಿ ನಡೆಯಲಿರುವ ನಗರದ ಎಚ್.ಎಸ್.ಆರ್. ಬಡಾವಣೆಯ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಿಂದ ಬೆಳಗ್ಗೆ 6 ಕ್ಕೆ ಆರಂಭವಾಗುವ ಜಾಗೃತಿ ಓಟವು 10,5 ಮತ್ತು 3 ಕಿ.ಮೀ. ಎಂದು ಮೂರು ವಿಭಾಗಗಳಲ್ಲಿ ನಡೆಯಲಿದೆ ಎಂದು ವೆನರಿಯಾಲಜಿಸ್ಟ್ ಅಧ್ಯಕ್ಷ ಡಾ. ಮಂಜುನಾಥ್ ಹುಲ್ಮನಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.
ಈ ವೇಳೆ ಅತಿಯಾದ ಸ್ಟಿರಾಯ್ಡ್ ಬಳಕೆ, ಸ್ವಯಂ ಔಷಧೋಪಚಾರಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಜವಾಬ್ದಾರಿಯುತ ಚರ್ಮದ ಆರೈಕೆಗಾಗಿ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳುವ, ಸಾಮಾನ್ಯ ಚರ್ಮ ರೋಗದ ಬಗ್ಗೆ ಅರಿವು, ಚಿಕಿತ್ಸಾ ವಿಧಾನಗಳು, ನಕಲಿ ವೈದ್ಯರ ಬಗ್ಗೆ ಎಚ್ಚರಿಕೆ ವಹಿಸುವ ಮತ್ತು ಇದರಿಂದ ಎದುರಾಗುವ ಅಪಾಯಗಳ ಕುರಿತು ಮಾಹಿತಿ ನೀಡಲಾಗುವುದು ಎಂದರು.
ವೃತ್ತಿಪರ ಚರ್ಮರೋಗ ಶಾಸ್ತ್ರದ ಜತೆಗೆ ಚರ್ಮ ರೋಗಗಳ ಬಗ್ಗೆ ಇರುವು ತಪ್ಪು ಕಲ್ಪನೆಯನ್ನು ತೊಡೆದುಹಾಕುವ ಗುರಿ ಹೊಂದಲಾಗಿದೆ. ಅನಿಯಂತ್ರಿತ ಚರ್ಮದ ಚಿಕಿತ್ಸೆಗಳಿಂದ ಎದುರಾಗುವ ಅಪಾಯಗಳ ಕುರಿತು ಜನರಿಗೆ ತಿಳುವಳಿಕೆ ಮೂಡಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವೆನರಿಯಾಲಜಿಸ್ಟ್ ಗೌರವ ಕಾರ್ಯದರ್ಶಿ ಡಾ. ಸಿ. ಮಹೇಶ್ ಕುಮಾರ್ ಮತ್ತು ಬೆಂಗಳೂರು ಚರ್ಮ ರೋಗ ವೈದ್ಯರ ಸಂಘದ ಅಧ್ಯಕ್ಷ ಡಾ. ಎಸ್. ಸಚ್ಚಿದಾನಂದ, ಖ್ಯಾತ ಚರ್ಮರೋಗ ತಜ್ಞರಾದ ಡಾ. ಬಿ.ಎಸ್.ಚಂದ್ರಶೇಖರ್, ಬೆಂಗಳೂರು ಚರ್ಮ ರೋಗ ವೈದ್ಯರ ಸಂಘದ ಗೌರವ ಕಾರ್ಯದರ್ಶಿ ಡಾ. ಸುಜಲ ಎಸ್. ಆರಾಧ್ಯ, ಸ್ಕಿನ್ನಥಾನ್ ಮುಖ್ಯ ಸಮನ್ವಯಕಾರ ಡಾ. ಪಿ. ಜಗದೀಶ್, ಇಎಸ್‌ಐಸಿ ಚರ್ಮರೋಗ ವಿಭಾಗದ ಮುಖ್ಯಸ್ಥ ಡಾ. ಎಂ. ಎಸ್. ಗಿರೀಶ್ ಉಪಸ್ಥಿತರಿದ್ದರು.