

ರಾಣೆಬೆನ್ನೂರ: ಚರ್ಮಗಂಟು ರೋಗ ಯಾವುದೆ ಕಾರಣಕ್ಕೂ ಜಾನುವಾರುಗಳಿಂದ ಮನುಷ್ಯರಿಗೆ ಬರುವುದಿಲ್ಲ. ಈ ಬಗ್ಗೆ ತಿಳಿದುಕೊಳ್ಳುವುದು ಅವಶ್ಯವಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಸುಳ್ಳು ಸಂದೇಶಗಳಿಗೆ ಯಾರೂ ಕಿವಿ ಕೊಡಬೇಡಿ ಎಂದು ಪಶು ವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಪರಮೇಶ ಹುಬ್ಬಳ್ಳಿ ಹೇಳಿದರು. ಪಶೈ ವೈದ್ಯ ಇಲಾಖೆ, ರೋಟರಿ ಸಂಸ್ಥೆಯ ತಾಲೂಕು ಘಟಕ ಹಾಗೂ ತಾಲೂಕಿನ ಜೋಯಿಸರಹರಳಹಳ್ಳಿ ಗ್ರಾಪಂ ವತಿಯಿಂದ ಬುಧವಾರ ಗ್ರಾಮದಲ್ಲಿ ಏರ್ಪಡಿಸಿದ್ದ ಚರ್ಮಗಂಟು ರೋಗ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರೋಗಗ್ರಸ್ತ ರಾಸುಗಳನ್ನು ಆರೋಗ್ಯವಂತ ಜಾನುವಾರುಗಳಿಂದ ಕೂಡಲೆ ಬೇರ್ಪಡಿಸಿ ವೈದ್ಯರಿಂದ ಚಿಕಿತ್ಸೆ ಕೊಡಿಸಬೇಕು. ದನದ ಕೊಟ್ಟಿಗೆಯಲ್ಲಿ ಸೊಳ್ಳೆ, ನೊಣ ಮತ್ತು ಉಣ್ಣೆಗಳನ್ನು ನಿಯಂತ್ರಿಸಬೇಕು. ಗಾಯಗಳ ಸೂಕ್ತ ಉಪಚಾರ ಹಾಗೂ ಇದರೊಂದಿಗೆ ಖನಿಜ ಮಿಶ್ರಣ, ರೋಗ ನಿರೋಧಕ ಶಕ್ತಿ ವರ್ಧಕ ಔಷಧಗಳನ್ನು ಬಳಸಬೇಕು. ಇದರಿಂದ ಜಾನುವಾರುಗಳು ನಿಶ್ಯಕ್ತವಾಗುವುದನ್ನು ತಪ್ಪಿಸಬಹುದು. ಚರ್ಮಗಂಟು ರೋಗ ತಗುಲಿದ ಎತ್ತುಗಳಿಗೆ ಕನಿಷ್ಟ 2ರಿಂದ 3 ವಾರಗಳ ಕಾಲ ಚಿಕಿತ್ಸೆ ಕೊಡಿಸಬೇಕು. ಇದರಿಂದ ರೋಗ ಹತೋಟೆಗೆ ತರಲು ಸಾಧ್ಯವಿದೆ ಎಂದರು. ಗ್ರಾಪಂ ಅಧ್ಯಕ್ಷೆ ಲಲಿತಾ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಚರ್ಮಗಂಟು ರೋಗ ತಗುಲಿದ ರೈತರಿಗೆ ಎಲ್‌ಎಸ್‌ಟಿ ಕಿಟ್ ವಿತರಿಸಲಾಯಿತು. ರೋಟರಿ ಸಂಸ್ಥೆಯ ತಾಲೂಕು ಅಧ್ಯಕ್ಷ ಡಾ. ಅನಂತರೆಡ್ಡಿ, ಕಾರ್ಯದರ್ಶಿ ಜಿ.ಎಸ್. ರಾಮಚಂದ್ರ, ಗ್ರಾಪಂ ಉಪಾಧ್ಯಕ್ಷ ಗದಿಗೆಪ್ಪ ಬ್ಯಾಡಗಿ, ಸದಸ್ಯರಾದ ಕುಮಾರ ಮುದ್ದಪ್ಪಳವರ, ಶಂಕರ ಹೊರಕೇರಿ, ಪ್ರಕಾಶ ಹಾಗೂ ಜಿ.ಜಿ. ಹೊಟ್ಟಿಗೌಡ್ರ, ಪ್ರಕಾಶ ಮಾಳಗಿ ಮತ್ತಿತರರು ಉಪಸ್ಥಿತರಿದ್ದರು.