ಕೌಶಲ ಆಧಾರಿತ ಉದ್ಯೋಗಗಳು ಸೃಷ್ಟಿ

Oplus_0
Oplus_0
Published on

ಚನ್ನರಾಯಪಟ್ಟಣ: ಇಂದಿನ ಸ್ಪರ್ಧಾಯುಗದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯೆ ಇದ್ದರೆ ಸಾಲದು. ವಿದ್ಯೆಯೊಂದಿಗೆ ಕೌಶಲ ಅಗತ್ಯ. ಆಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದು ಬಾಹುಬಲಿ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಸುನೀಲ್‌ಕುಮಾರ್ ತಿಳಿಸಿದರು.


ಪಟ್ಟಣದ ಸದ್ವಿದ್ಯಾ ಎಜುಕೇಷನ್ ಟ್ರಸ್ಟ್ ಅಡಿ ಕಾರ್ಯನಿರ್ವಹಿಸುತ್ತಿರುವ ಫೋಕಸ್ ಪದವಿಪೂರ್ವ ಕಾಲೇಜಿನಿಂದ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಪಂಡಿತ್ ಸಿ.ಆರ್.ಶ್ರೀನಿವಾಸ ಅಯ್ಯಂಗಾರ್ ಅವರ ಸ್ಮರಣಾರ್ಥ ವಿದ್ಯಾಪ್ರತಿಭಾ ಪುರಸ್ಕಾರ ಹಾಗೂ 2024-25ನೇ ಸಾಲಿನ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ಜಾಗತಿಕವಾಗಿ ಪ್ರಬಲವಾದ ಸ್ಪರ್ಧೆ ಇದ್ದು ವಿದ್ಯಾರ್ಥಿಗಳು ಪಠ್ಯದಲ್ಲಿ ಶೇ.100 ಅಂಕಗಳಿಸಿದರೂ ಉದ್ಯೋಗ ಇಲ್ಲದ ಸ್ಥಿತಿ ಇದೆ. ಇದಕ್ಕೆ ಕಾರಣ ಆತನಲ್ಲಿ ಸ್ವಂತಿಕೆ, ಕೌಶಲ ಇಲ್ಲದಿರುವುದು. ಇಂದಿನ ಕಾಲದಲ್ಲಿ ವಿದ್ಯೆ ಆಧಾರಿತ ಉದ್ಯೋಗದ ಬದಲಾಗಿ ಕೌಶಲ ಆಧಾರಿತ ಉದ್ಯೋಗಗಳು ಸೃಷ್ಟಿಯಾಗಿವೆ ಎಂದರು.


ಕಾಲೇಜುಗಳಲ್ಲಿಯೂ ವಿದ್ಯಾರ್ಥಿಗಳಿಗೆ ಹೊಸದನ್ನು ಕಲಿಸುವ, ತಿಳಿಸುವ ಕೆಲಸಗಳು ನಿರಂತರವಾಗಿ ಆಗುತ್ತಿರಬೇಕು, ಗುಣಮಟ್ಟದ ಶಿಕ್ಷಕರನ್ನು ಹೊಂದಿ, ಅವರಿಗೆ ಪ್ರತಿವರ್ಷ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕೊಡಿಸುವ ಮೂಲಕ ಅವರನ್ನು ಗಟ್ಟಿಗೊಳಿಸಿದಾಗ ವಿದ್ಯಾರ್ಥಿಗಳು ಗಟ್ಟಿಗೊಳ್ಳುತ್ತಾರೆ. ಆಗ ಕಾಲೇಜಿಗೆ ಉತ್ತಮ ಫಲಿತಾಂಶ ಲಭಿಸುತ್ತದೆ. ಹೆಚ್ಚಿನ ಮಟ್ಟದಲ್ಲಿ ವಿದ್ಯಾರ್ಥಿಗಳು ದಾಖಲಾಗಿ ಕಾಲೇಜು ಉತ್ತುಂಗಕ್ಕೇರಲು ಸಾಧ್ಯವಾಗುತ್ತದೆ ಎಂದರು.
ಕ್ರೈಸ್ಟ್ ದ ಕಿಂಗ್ ಪಿಯು ಕಾಲೇಜಿನ ಪ್ರಾಂಶುಪಾಲ ಅಂಥೋನಿ ರಾಜ್ ಮಾತನಾಡಿ, ನಿಸರ್ಗದಲ್ಲಿ ಅತಿ ಶ್ರೇಷ್ಠವಾದ ಜೀವಿ ಮನುಷ್ಯ. ಜ್ಞಾನದ ಕಣಜವನ್ನಾಗಿ ದೇವರು ಸೃಷ್ಟಿಸಿದ್ದಾನೆ. ಇದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವುದು ನಮ್ಮ ಕೈಲಿದೆ. ಮಕ್ಕಳಿಗಾಗಿ ಬಿಸಿಲು, ಮಳೆಯೆನ್ನದೆ ದುಡಿಯುವ ಪಾಲಕರ ಶ್ರಮಕ್ಕೆ ಪ್ರತಿಫಲ ನೀಡಬೇಕು ಎಂದು ಹೇಳಿದರು.


ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ನಿವೃತ್ತ ಇಂಜಿನಿಯರ್ ಶೇಷಾಚಲ ಸನ್ಮಾನಿಸಿದರು. ಸಿ.ಎಸ್.ಹರ್ಷ, ಪ್ರಾಂಶುಪಾಲ ಡಿ.ಆರ್.ಗೋಪಾಲಕೃಷ್ಣ, ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ಬಿ.ಪಿ.ಮೋಹನ್, ಎ.ಆರ್.ಜೀವನ್, ಸಿ.ಎಸ್.ಮಧು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net