ಸ್ವಾವಲಂಬಿ ಕುಟುಂಬಕ್ಕೆನೆರವಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

SKDRDP-Program-at-honnavar
Published on

ಹೊನ್ನಾವರ: `ಕುಟುಂಬವನ್ನು ಸ್ವಾವಲಂಭನೆಯ ಪಥದಲ್ಲಿ ಮುನ್ನಡೆಸಲು ಗ್ರಾಮಾಭಿವೃದ್ದಿ ಯೋಜನೆಯು ಸಹಕಾರಿಯಾಗಲಿದೆ ಎಂದು ಎಸ್‌ಕೆಡಿಆರ್‌ಡಿಪಿಯ ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡ ಹೇಳಿದರು.
ಪಟ್ಟಣದ ಪ್ರಭಾತನಗರದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಹೊನ್ನಾವರ ವಲಯದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಒಕ್ಕೂಟಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜಮುಖಿ ಕಾರ್ಯದ ಮೂಲಕ ಗ್ರಾಮಾಭಿವೃದ್ದಿ ಯೋಜನೆಯು ಮನ್ನಣೆ ಪಡೆದಿದೆ. ನಿರುದ್ಯೋಗ ನಿವಾರಿಸಲು ರುಡಸೆಟ್ ಸಂಸ್ಥೆ, ಕುಟುಂಬದ ಬಡತನ ನಿವಾರಿಸಲು ಸಂಘಗಳನ್ನು ಆರಂಭಿಸಲಾಗಿದ್ದು ಜನರು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದರು.
ಪತ್ರಕರ್ತ ಜಿ.ಯು.ಭಟ್ ಮಾತನಾಡಿ ನಾವು ನೀವು ಕೊಡುವ ತೆರಿಗೆ ಹಣದಲ್ಲೆ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಯು ಅನುಷ್ಟಾನವಾಗಲಿದೆ. ಆದರೆ ಧರ್ಮಸ್ಥಳದಲ್ಲಿ ಯಾವುದೂ ಉಚಿತವಲ್ಲ, ಆದರೆ ಸಹಾಯ ಸಿಗುವುದು ಖಚಿತವಾಗಿದೆ. ಸ್ವಾಭಿಮಾನದಿಂದ ಬದುಕು ನಡೆಸಲು ಯೋಜನೆಯು ಸಹಕಾರಿಯಾಗಲಿದೆ ಎಂದರು.
ನಿಕಟಪೂರ್ವ ಯೋಜನೆಯ ಪದಾಧಿಕಾರಿಗಳು ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರಿಸಿದರು. ಯೋಜನೆಯ ಫಲಾನುಭವಿಗಳಿಗೆ ಪ್ರಗತಿನಿಧಿ, ಜಲಮಂಗಲಾ, ಶೌಚಾಲಯ ನಿರ್ಮಾಣ, ಮಾಶಾಸಣಾ, ಫಲಾನುಭವಿಗಳಿಗೆ ಆದೇಶ ಪ್ರತಿಯನ್ನು ವಿತರಿಸಲಾಯಿತು.
ಶಿಕ್ಷಕ ಚಿದಾನಂದ ಪಟಗಾರ ಧಾರ್ಮಿಕ ಉಪನ್ಯಾಸ ನೀಡಿದರು. ಮಾಜಿ ಸೈನಿಕ ರಾಜೇಶ ನಾಯ್ಕ, ಪೂಜಾ ಸಮಿತಿ ಗೌರವಾದ್ಯಕ್ಷ ಶಿವರಾಜ ಮೇಸ್ತ, ಅಧ್ಯಕ್ಷ ಶ್ರೀಪಾದ ನಾಯ್ಕ, ಯೋಜನಾಧಿಕಾರಿ ವಾಸಂತಿ ಅಮಿನ್ ಸ್ವಾಗತಿಸಿದರು. ಮೇಲ್ವಿಚಾರಕ ನಾಗರಾಜ ಕೆ. ವರದಿ ವಾಚಿಸಿದರು. ಸೇವಾಪ್ರತಿನಿಧಿಗಳಾದ ಚಂದ್ರಾವತಿ, ಮಂಜುಳಾ, ಕೋಮಲಾ, ಶರ್ಮಿಳಾ, ಸಹನಾ, ದೀಪಾ, ಜಯಲತಾ, ರತ್ನಾ, ಚೇತನಾ ಹಾಗೂ ಸಂಘದ ಸದಸ್ಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net