ಗೌರಿಬಿದನೂರು : ಆಂಧ್ರಪ್ರದೇಶದ ಚಿನ್ನದ ವ್ಯಾಪಾರಿಗೆ ನಕಲಿ ಚಿನ್ನದ ಗುಂಡಿನ ಹಾರ ನೀಡಿ ಲಕ್ಷಾಂತರ ರೂ. ವಂಚಿಸಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಕಾಶಪುರ ಗೇಟ್ ಹಕ್ಕಿಪಿಕ್ಕಿ ಕಾಲನಿಯ ಗಿರೀಶ್(23), ಇಲಿಯೇಷ್(33), ಅಗ್ರಹಾರ ತಾಂಡಾದ ರವಿಕುಮಾರ್(28), ನಂದೀಶ್ ನಾಯ್ಕ(22), ಆಂಧ್ರಪ್ರದೇಶದ ನಂದ್ಯಾಲ ತಾಲೂಕಿನ ರಾಮಾಪುರಂ ಬ್ರಹ್ಮಯ್ಯ(38) ಹಾಗೂ ಅಹಮದ್ ಹುಸೇನ್ (47) ಎಂಬ ಆರೋಪಿಗಳನ್ನು ಬಂಧಿಸಿ 23 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ.
ಚಿನ್ನದ ವ್ಯಾಪಾರಿಗೆ ಮಂಕುಬೂದಿ
ಆರೋಪಿಗಳೆಲ್ಲರೂ ಸಂಚು ಹೂಡಿ ಆಂಧ್ರಪ್ರದೇಶದ ನಂದ್ಯಾಲದ ಲಲಿತನಗರದ ಚಿನ್ನದ ವ್ಯಾಪಾರಿ ಅಲ್ಲೂರಯ್ಯ ಅವರಿಗೆ ಮೊದಲಿಗೆ ಅಸಲಿ ಚಿನ್ನದ ಗುಂಡುಗಳನ್ನು ನೀಡಿ ನಂಬಿಸಿದ್ದರು. ಬಳಿಕ ಇದೇ ರೀತಿ 2-3 ಕೆ.ಜಿ ತೂಕದ ಗುಂಡುಗಳ ಹಾರ ನಮ್ಮ ಬಳಿ ಇದೆ. 24 ಲಕ್ಷ ರೂ. ಬೆಲೆ ಬಾಳಲಿದೆ ಎಂದು ಹೇಳಿದ್ದರು. ಹಾರ ಬೇಕಾದರೆ 24 ಲಕ್ಷ ರೂ. ಹೊಂದಿಸಿಕೊಂಡು ಗೌರಿಬಿದನೂರು ತಾಲೂಕಿನ ಗೊಡ್ಡಾವಲಹಳ್ಳಿಯ ಮುತ್ತುನಾರಾಯಣ ಸ್ವಾಮಿ ದೇವಾಲಯದ ಬಳಿ ಬರುವಂತೆ ಅಲ್ಲೂರಯ್ಯ ಅವರಿಗೆ ತಿಳಿಸಿದ್ದರು. ಅದರಂತೆ ಹಣ ಹೊಂದಿಸಿಕೊಂಡು ಸೂಚಿಸಿದ ಸ್ಥಳಕ್ಕೆ ಬಂದಿದ್ದಾರೆ. ಆರೋಪಿಗಳು ಮೊದಲೇ ರೂಪಿಸಿದ್ದ ಸಂಚಿನಂತೆ ನಕಲಿ ಗುಂಡಿನ ಹಾರವನ್ನು ವ್ಯಾಪಾರಿಗೆ ನೀಡಿ ಹಣ ಪಡೆದುಕೊಂಡಿದ್ದಾರೆ. ಇಲ್ಲಿ ಇದ್ದರೆ ಅನುಮಾನ ಬರುತ್ತದೆ. ತಕ್ಷಣ ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ಹೇಳಿದ್ದಾರೆ. ಇದನ್ನು ನಂಬಿದ ವ್ಯಾಪಾರಿ ಅಲ್ಲೂರಯ್ಯ ಅಲ್ಲಿಂದ ಸ್ವಲ್ಪ ದೂರ ಹೋಗಿ ಗುಂಡುಗಳ ಹಾರವನ್ನು ಪರಿಶೀಲಿಸಿದಾಗ ಅದು ನಕಲಿ ಗುಂಡಿನ ಹಾರ ಎಂದು ತಿಳಿದಿದೆ. ನಂತರ ಅಲ್ಲೂರಯ್ಯ ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣ ಭೇದಿಸಲು ಡಿವೈಎಸ್ಪಿ ಶಿವಕುಮಾರ್, ವೃತ್ತ ನಿರೀಕ್ಷಕ ಕೆ.ಪಿ.ಸತ್ಯನಾರಾಯಣ್, ಪಿಎಸ್‌ಐಗಳಾದ ಲಲಿತಮ್ಮ, ರಮೇಶ್ ಗುಗ್ಗರಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು. ಕಾರ್ಯಾಚರಣೆ ಕೈಗೊಂಡ ತಂಡ ಆರೋಪಿಗಳನ್ನು ಬುಧವಾರ ಬಂಧಿಸಿದೆ. ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿರುವ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ನಗದು ಬಹುಮಾನ ಘೋಷಿಸಿದ್ದಾರೆ.