ಹೋಟೆಲ್‌ನಲ್ಲಿ ಎರಡು ತಿಂಗಳಿನಿಂದ ತಂಗಿದ್ದ ದಂಪತಿ; ಆ ನಾಲ್ವರೊಂದಿಗೆ ಸೇರಿ ಮಾಡುತ್ತಿದ್ದುದೇ ಬೇರೆ ಕಿತಾಪತಿ!

Untitled-1
Published on

ಬೆಂಗಳೂರು: ಗಂಡ-ಹೆಂಡತಿ ಮತ್ತು ಆ ನಾಲ್ವರು ಸೇರಿ ಎರಡು ತಿಂಗಳು ಕಾಲ ಹೋಟೆಲ್‌ನಲ್ಲಿ ಇದ್ದುಕೊಂಡು ಮಾಡುತ್ತಿದ್ದ ಕಿತಾಪತಿಯ ವಿಷಯ ಕೊನೆಗೆ ಪೊಲೀಸರವರೆಗೂ ತಲುಪಿದ್ದು, ದಂಪತಿ ಸೇರಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶ ಮೂಲದ ದಂಪತಿ ಶೇಖ್ ಅಹ್ಮದ್-ಜರೀನಾ ಅಹ್ಮದ್ ಹಾಗೂ ಬೆಂಗಳೂರು ಮೂಲದ ರಾಘವೇಂದ್ರ ಪ್ರಸಾದ್, ನಯೀಮುಲ್ಲಾ, ಮುದಾಸೀರ್ ಅಹ್ಮದ್ ಮತ್ತು ಫರೀದಾ ಬಂಧಿತ ಆರೋಪಿಗಳು.

ದಂಪತಿ ಶೇಖ್‌ ಹಾಗೂ ಜರೀನಾ ಬೆಂಗಳೂರಿನ ವೈಯಾಲಿಕಾವಲ್ ಪ್ರದೇಶದ ಹೋಟೆಲ್‌ವೊಂದರಲ್ಲಿ ಎರಡು ತಿಂಗಳಿನಿಂದ ವಾಸವಾಗಿದ್ದರು. ಹೊಟೇಲ್‌ನಲ್ಲಿದ್ದುಕೊಂಡೇ ಸಭೆ-ಸಮಾರಂಭ ನಡೆಸುತ್ತಿದ್ದ ಇವರಿಗೆ ಉಳಿದ ನಾಲ್ವರು ಜೊತೆಯಾಗಿದ್ದರು.

ಅಮಾಯಕರನ್ನೇ ಗುರಿಯಾಗಿಸಿ ತಮ್ಮ ವಂಚನೆಯ ಬಲೆ ಬೀಸುತ್ತಿದ್ದ ಆರೋಪಿಗಳು ಬಳಿಕ ಅವರಿಂದ ಲಕ್ಷ ಲಕ್ಷ ರೂಪಾಯಿ ವಸೂಲಿ ಮಾಡಿ ಮೋಸ ಮಾಡುತ್ತಿದ್ದರು. ನಮ್ಮ ಬಳಿ ರೈಸ್ ಪುಲ್ಲಿಂಗ್ ವಸ್ತುಗಳು ಇವೆ. ಅದನ್ನ ಮಾರಾಟ ಮಾಡಿದರೆ ಕೋಟ್ಯಂತರ ರೂಪಾಯಿ ಹಣ ಸಿಗುತ್ತದೆ. ಬಂದ ಹಣದಲ್ಲಿ ನಿಮಗೂ ಹಣ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆಯುತ್ತಿದ್ದ ಇವರು, ಅವರನ್ನು ನಂಬಿಸುವ ಸಲುವಾಗಿ ಸೋಷಿಯಲ್‌ ಮೀಡಿಯಾದಲ್ಲಿನ ಕೆಲವು ಪೋಸ್ಟ್‌ಗಳನ್ನು ತೋರಿಸುತ್ತಿದ್ದರು.

ಸಿಡಿಲು ಹೊಡೆದ ಪಾತ್ರೆಗೆ ಅಕ್ಕಿ ಕಾಳು ಹಾಕಿ ಸೆಳೆಯುತ್ತದೆ ಎಂದು ನಂಬಿಸುತ್ತಿದ್ದರು. ಬಳಿಕ ಹಣ ಕೊಡದೆ ವಂಚಿಸುತ್ತಿದ್ದರು. ಈ ಸಂಬಂಧ ಸಿಸಿಬಿ ಪೊಲೀಸರಿಗೆ ದೂರು ತಲುಪಿದ್ದರಿಂದ ಸಿಸಿಬಿ ಎಸಿಪಿ ಜಗನ್ನಾಥ ರೈ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ. ವೈಯಾಲಿಕಾವಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net