ಐದನೇ ಮಹಡಿಯಿಂದ ಬಿದ್ದು ಭೀಕರವಾಗಿ ಸತ್ತ ಕಾರ್ಮಿಕ; ಬಿದ್ದ ರಭಸಕ್ಕೆ ಸೊಂಟದಿಂದ ಕಳಚಿಹೋಯ್ತು ಕಾಲು!

Untitled-1
Published on

ಬೆಂಗಳೂರು: ಇದೊಂದು ದುರಂತ ಈ ಕಾರ್ಮಿಕನ ಮನೆಯವರ ಹಬ್ಬದ ಸಂಭ್ರಮವನ್ನೇ ಕಿತ್ತುಕೊಂಡಿದೆ. ಹಬ್ಬದ ದಿನವೂ ಕೆಲಸ ಮಾಡುತ್ತಿದ್ದ ಈ ಕಾರ್ಮಿಕ ಆಯತಪ್ಪಿ ಐದನೇ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದಾನೆ. ಮಾತ್ರವಲ್ಲದೆ, ಬಿದ್ದ ರಭಸಕ್ಕೆ ಸೊಂಟದಿಂದ ಒಂದು ಕಾಲು ಕಳಚಿಕೊಂಡಿದ್ದು, ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ಬೆಂಗಳೂರಿನ ಡಿ.ಜೆ.ಹಳ್ಳಿ ವಾಹಬ್‌ ನಗರದ ನಿವಾಸಿ ವೆಂಕಟಸ್ವಾಮಿ (45) ಎಂಬಾತ ಸಾವಿಗೀಡಾದ ಕೂಲಿ ಕಾರ್ಮಿಕ. ಈತ ಜೆ.ಸಿ. ನಗರದಲ್ಲಿ ಕಟ್ಟಡ ನಿರ್ಮಾಣದಲ್ಲಿ ನಿರತನಾಗಿದ್ದಾಗ ಈ ದುರಂತ ಸಂಭವಿಸಿದೆ.

ಜೆ.ಸಿ.ನಗರದ ಬೋರ್ ಬ್ಯಾಂಕ್ ರೋಡ್ ಬಳಿ 10 ದಿನಗಳಿಂದ ಕಟ್ಟಡ ನಿರ್ಮಾಣದ ಕೆಲಸ ನಡೆಯುತ್ತಿತ್ತು. ಇಲ್ಲಿ ಗಾರೆ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದ ವೆಂಕಟಸ್ವಾಮಿ ಐದನೇ ಮಹಡಿಯಲ್ಲಿ ಲಿಫ್ಟ್‌ ಕ್ರೇನ್‌ ಚಾಲನೆ ಮಾಡುತ್ತಿದ್ದಾಗ ಅವಘಡ ಸಂಭವಿಸಿದೆ.

ಅವಘಡ ಸಂಭವಿಸಿದ ಸ್ಥಳಕ್ಕೆ ಜೆ.ಸಿ.ನಗರ ಪೊಲೀಸರು ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಶವವನ್ನು ಅಂಬೇಡ್ಕರ್‌ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಸಾವಿಗೀಡಾದ ವ್ಯಕ್ತಿಯ ಕುರಿತು ಹಾಗೂ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು, ತನಿಖೆ ನಡೆಯುತ್ತಿದೆ. ಜೆ.ಸಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net