ಆಮೆ ವೇಗದಲ್ಲಿ ಶಿವಕುಮಾರಸ್ವಾಮೀಜಿ ಪುತ್ಥಳಿ ನಿರ್ಮಾಣ

26-Nov-Kudu-2 (2)
Published on

ಶ್ರೇಯಸ್ ಕಾಗಿಮಡು ಕುದೂರು

ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರು ವೀರಾಪುರದಲ್ಲಿ 111 ಅಡಿ ಎತ್ತರದ ಶ್ರೀಗಳ ಪುತ್ಥಳಿ ಹಾಗೂ ಸಭಾಂಗಣ ನಿರ್ಮಾಣ ಯೋಜನೆಗೆ ಚಾಲನೆ ದೊರೆತು ವರ್ಷ ಕಳೆದರೂ ಯೋನೆ ಪೂರ್ಣಗೊಂಡಿಲ್ಲ. ಕಾಮಗಾರಿ ಇದೇ ವೇಗದಲ್ಲಿ ಮುಂದುವರಿದರೆ ಇನ್ನು ಹತ್ತು ವರ್ಷ ಕಳೆದರೂ ಪುತ್ಥಳಿ ನಿರ್ಮಾಣ ಮುಗಿಯುವುದಿಲ್ಲ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2019ರ ನವೆಂಬರ್ 8ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪುತ್ಥಳಿ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಿದ್ದರು. ಹಾಗೂ 2 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಪುತ್ಥಳಿ ಲೋಕಾರ್ಪಣೆ ಮಾಡುವುದಾಗಿ ೋಷಿಸಿದ್ದರು. ಆದರೆ, ನಾಲ್ಕು ವರ್ಷ ಕಳೆದರೂ ಶೇ.10ರಷ್ಟೂ ಕಾಮಗಾರಿ ಮುಗಿದಿಲ್ಲ. ಹಾಗೂ ಈ ಕಾಮಗಾರಿಗೆ 80 ಕೋಟಿ ರೂ. ಮೀಸಲಿಡಲಾಗಿದೆ ಎಂದು ಬಿಎಸ್‌ವೈ ತಿಳಿಸಿದ್ದರು.

55 ಕೋಟಿ ಪುತ್ಥಳಿಗೆ ಹಾಗೂ ಉಳಿದ 25 ಕೋಟಿ ರೂ. ವೀರಾಪುರ ಗ್ರಾಮದ ಅಭಿವೃದ್ಧಿಗೆ ಅಂದಿನ ಮುಖ್ಯಮಂತ್ರಿ ಬಿಎಸ್‌ವೈ ಮೀಸಲಿರಿಸಿದ್ದರು. ಆದರೆ, ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ಸಕಾಲದಲ್ಲಿ ಹಣ ಬಿಡುಗಡೆ ಆಗದೆ ಕಾಮಗಾರಿ ವಿಳಂಬವಾಗುತ್ತಿದೆ. ಹಣ ಬಿಡುಗಡೆ ಮಾಡಿಸಿ ಕಾಮಗಾರಿಯ ವೇಗ ಹೆಚ್ಚಿಸುವಂತೆ ಹಾಲಿ ಸಂಸದರು, ಶಾಸಕರಿಗೆ ಮನವಿ ಮಾಡಿದ್ದರೂ ಅವರಿಂದ ಈ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಪುತ್ಥಳಿ ನಿರ್ಮಾಣದ ನೇತೃತ್ವ ವಹಿಸಿದ್ದ ರಾಮನಗರ ಜಿಲ್ಲೆ ಬಿಜೆಪಿ ಮಾಜಿ ಅಧ್ಯಕ್ಷ ರುದ್ರೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

16 ಎಕರೆ ವಿಸ್ತಾರದಲ್ಲಿ ಅಭಿವೃದ್ದಿ

ವೀರಾಪುರ ಗ್ರಾಮದ ಸೋಮಶೇಖರ್ ಎಂಬುವರು ಒಂದು ಎಕರೆ ಜಾಗವನ್ನು ಪುತ್ಥಳಿ ನಿರ್ಮಾಣ ಕಾರ್ಯಕ್ಕೆ ದಾನವಾಗಿ ನೀಡಿದರು. ನಂತರ ಪುತ್ಥಳಿಯ ಜತೆಗೆ ವಿವಿಧ ಅಭಿವೃದ್ದಿ ಕಾರ್ಯಗಳಿಗೆ ಜಾಗದ ಕೊರತೆ ಎದುರಾದಾಗ ಅದಕ್ಕೆ ಹೊಂದಿಕೊಂಡಂತೆಯೇ ಇದ್ದ 15 ಎಕರೆ ಸರ್ಕಾರಿ ಜಾಗವನ್ನು ಸರ್ಕಾರ ಮಂಜೂರು ಮಾಡಿಕೊಟ್ಟಿತ್ತು. ಹೀಗೆ ಒಟ್ಟು 16 ಎಕರೆ ಪ್ರದೇಶದಲ್ಲಿ ಸಭಾಂಗಣ, ಥಿಯೇಟರ್, ದಾಸೋಹ ಭವನ ಒಳಗೊಂಡಂತೆ ಈ ಜಾಗವನ್ನು ಬಳಕೆ ಮಾಡಲು ನೀಲಿನಕ್ಷೆ ರೂಪಿಸಲಾಗಿದೆ.

141 ಅಡಿ ಎತ್ತರ 

ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿ ಅವರು 111 ವರ್ಷ ಬದುಕಿದ್ದರು. ಈ ಹಿನ್ನೆಲೆಯಲ್ಲಿ 111 ಅಡಿ ಎತ್ತರದ ಪುತ್ಥಳಿ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ತಳಪಾಯ 30 ಅಡಿ ಇದ್ದು, ಅದರ ಮೇಲೆ 111 ಅಡಿ ಎತ್ತರದ ಪುತ್ಥಳಿ ನಿರ್ಮಾಣವಾಗುವುದರಿಂದ ಒಟ್ಟು ಎತ್ತರ 141 ಅಡಿಗಳಾಗಲಿದೆ. ಸಮೀಪದಲ್ಲಿಯೇ ಸಭಾಭವನ, ಮ್ಯೂಸಿಯಂ, ಥಿಯೇಟರ್, ಪ್ರಾರ್ಥನಾ ಮಂದಿರ ನಿರ್ಮಾಣವಾಗಲಿದೆ. ಥಿಯೇಟರ್‌ನಲ್ಲಿ ಶ್ರೀಗಳ ಬದುಕು ಮತ್ತು ಸಾಧನೆಯ ಕುರಿತಾಗಿ ಸಿನೆಮಾ, ಸಾಕ್ಷ್ಯಚಿತ್ರಗಳು ಹಾಗೂ ಫೋಟೋ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಹಾಗೂ ಪುತ್ಥಳಿಯ ಸುತ್ತಲೂ ಭಕ್ತರು ಕೂತು ಅದರ ಸೌಂದರ‌್ಯ ಸವಿಯಲು ಆಸನ ವ್ಯವಸ್ಥೆ ಆಗಲಿದೆ. ಈ ಮೂಲಕ ವೀರಾಪುರ ಗ್ರಾಮವನ್ನು ವಿಶ್ವದರ್ಜೆಯ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸುವ ಉದ್ದೇಶದೊಂದಿಗೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.

ರಾಜಕಾರಣಿಗಳಿಗೇ ಪ್ರೀತಿ 

ರಾಷ್ಟ್ರೀಯ ಹೆದ್ದಾರಿ 75ರಿಂದ ವೀರಾಪುರ ಗ್ರಾಮದವರೆಗೂ ಸುಸಜ್ಜಿತ ವಿಶಾಲ ರಸ್ತೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ರಾಮನಗರದ ಅಂದಿನ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಭರವಸೆ ನೀಡಿದ್ದರು. ಸದ್ಯ ವೀರಾಪುರ ರಸ್ತೆಯಲ್ಲಿ ವೃದ್ದರು, ಗರ್ಭಿಣಿಯರು ಓಡಾಡಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಪುತ್ಥಳಿ ಕಾರ್ಯ ಇದೇ ವೇಗದಲ್ಲಿ ಸಾಗಿದರೆ ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ 5 ವರ್ಷವಾದರೂ ಬೇಕಾಗುತ್ತದೆ. ಆಗ ಅದರ ಉದ್ಘಾಟನೆಗೆ ಬರುವ ಮಂತ್ರಿಗಳಿಗೆ ತೊಂದರೆ ಆಗಬಾರದೆಂದು ರಸ್ತೆಗೆ ಡಾಂಬರೀಕರಣ ಕಾರ್ಯ ನಡೆಸುತ್ತಾರೆ. ಆದರೆ, ಅಲ್ಲಿಯವರೆಗೂ ಸಾರ್ವಜನಿಕರು ಸಮರ್ಪಕ ರಸ್ತೆಯಿಲ್ಲದೆ ಪರದಾಡಬೇಕಾಗಿದೆ ಎನ್ನುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಗಂಭೀರವಾಗಿ ಪರಿಗಣಿಸಿಲ್ಲ

ಗೆದ್ದ ನಂತರ ಮಾಡುವ ಮೊದಲ ಕೆಲಸವೆಂದರೆ ಡಾ. ಶಿವಕುಮಾರಸ್ವಾಮೀಜಿ ಅವರ ಪುತ್ಥಳಿ ಮತ್ತು ವೀರಾಪುರದ ಅಭಿವೃದ್ಧಿ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದ್ದರು. ಗೆದ್ದ ನಂತರ, ನೆನಪಿಸಿದಾಗ ಈಗಷ್ಟೇ ಸರ್ಕಾರ ರಚನೆಯಾಗಿದೆ, ಸ್ವಲ್ಪ ದಿನ ಹೋಗಲಿ ಎಂದಿದ್ದರು. ಆದರೆ, ಅವರು ಈ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಕಾಣಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net