ಪರಿಸ್ಥಿತಿ ಕೈ ಮೀರಿದರೆ ಆಪತ್ತು

18GTL1
Published on

ಹಾವೇರಿ: ಜಿಲ್ಲೆಯಲ್ಲಿ ಶನಿವಾರ ಹಾನಗಲ್ಲ ನ್ಯಾಯಾಲಯದ ಗ್ರುಪ್ ಡಿ ನೌಕರ ಸೇರಿ 15 ಜನರಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 400ರ ಗಡಿ ದಾಟಿದೆ. 13 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು ಜನರಲ್ಲಿ ಆತಂಕ ಉಂಟು ಮಾಡಿದೆ. ಶುಕ್ರವಾರ ರಾಣೆಬೆನ್ನೂರ ತಾಲೂಕಿನಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡ 32 ಜನರಿಗೆ ಪಾಸಿಟಿವ್ ಬಂದಿದೆ. ಶಿಗ್ಗಾಂವಿ ತಹಸೀಲ್ದಾರ್​ಗೂ ಸೋಂಕು ದೃಢಪಟ್ಟಿದ್ದು, ಅವರ ಸಂಪರ್ಕ ಹೊಂದಿದವರಿಗೆ ಈಗ ಢವಢವ ಶುರುವಾಗಿದೆ.

ಜಿಲ್ಲೆಯಲ್ಲಿ ಶನಿವಾರದ 15 ಪ್ರಕರಣಗಳು ಸೇರಿ ಈವರೆಗೆ 405 ಜನರಿಗೆ ಕರೊನಾ ದೃಢಗೊಂಡಿದೆ. ಇಂದಿನ 13 ಜನ ಸೇರಿ ಈವರೆಗೆ 288 ಜನರು ಸೋಂಕಿನಿಂದ ಗುಣವಾಗಿ ಬಿಡುಗಡೆ ಹೊಂದಿದ್ದಾರೆ. 108 ಪ್ರಕರಣಗಳು ಸಕ್ರಿಯವಾಗಿವೆ. ಶನಿವಾರ ಹಾವೇರಿ ಹಾಗೂ ರಾಣೆಬೆನ್ನೂರಿನ ಇಬ್ಬರು ಸೇರಿ ಈವರೆಗೆ ಒಟ್ಟು 9 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.

ಶನಿವಾರ ಹಾವೇರಿ ತಾಲೂಕಿನಲ್ಲಿ 4, ರಾಣೆಬೆನ್ನೂರ, ಸವಣೂರ ಹಾಗೂ ಹಾನಗಲ್ಲ ತಾಲೂಕಿನಲ್ಲಿ ತಲಾ ಮೂವರಿಗೆ, ಶಿಗ್ಗಾಂವಿ ತಾಲೂಕಿನಲ್ಲಿ ಇಬ್ಬರಿಗೆ ಸೋಂಕು ದೃಢಪಟ್ಟಿದೆ.

ಹಾವೇರಿ ತಾಲೂಕು: ಗುತ್ತಲದ ರಾಘವೇಂದ್ರ ಸ್ವಾಮಿ ಮಠದ ಬಳಿಯ ನಿವಾಸಿ 35 ವರ್ಷದ ಮಹಿಳೆ, ಬೆಂಗಳೂರು ಪ್ರಯಾಣ ಹಿನ್ನೆಲೆಯ ಯಲಿಪೇಟೆ ಬಜಾರ್ ಓಣಿಯ 46 ವರ್ಷದ ಪುರುಷ, ಕರ್ಜಗಿ ಗ್ರಾಮದ 50 ವರ್ಷದ ಮಹಿಳೆ ಹಾಗೂ ಮರಣ ಹೊಂದಿದ್ದ ಹಾವೇರಿ ಮೆಹಬೂಬ್ ನಗರದ 62 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಹಾನಗಲ್ಲ ತಾಲೂಕು: ಪಟ್ಟಣದ ಚಿದಂಬರ ನಗರದ ನಿವಾಸಿ, ಜೆಎಂಎಫ್​ಸಿ ನ್ಯಾಯಾಲಯದಲ್ಲಿ ಗ್ರುಪ್ ಡಿ ನೌಕರರನಾಗಿದ್ದ 25 ವರ್ಷದ ಪುರುಷ, ಐಎಲ್​ಐ ಲಕ್ಷಣಗಳಿದ್ದ ಕುಮಾರೇಶ್ವರ ನಗರದ 20 ವರ್ಷದ ಪುರುಷ, ಬಸಾಪುರ ಗ್ರಾಮದ 25 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಸವಣೂರ ತಾಲೂಕು ಅಂಬೇಡ್ಕರ್ ನಗರದ 27 ವರ್ಷದ ಪುರುಷ, ಮಶೂರ್ ನಗರದ ನಿವಾಸಿ 20 ವರ್ಷದ ಯುವಕ, ಐಎಲ್​ಐ ಲಕ್ಷಣಗಳಿದ್ದ ಹತ್ತಿಮತ್ತೂರ ಗ್ರಾಮದ 45 ವರ್ಷದ ಪುರುಷನಿಗೆ ಸೋಂಕು ತಗುಲಿದೆ.

ರಾಣೆಬೆನ್ನೂರ ತಾಲೂಕು ಉಮಾಶಂಕರ ನಗರದ 68 ವರ್ಷದ ಮಹಿಳೆ, ಕಂಟೇನ್ಮೆಂಟ್ ಜೋನ್ ಆಗಿರುವ ಮಾರುತಿ ನಗರದ 29 ವರ್ಷದ ಮಹಿಳೆ ಹಾಗೂ ಈಗಾಗಲೇ ಮೃತಪಟ್ಟಿರುವ ಪೀರಜಾದೆ ಗಲ್ಲಿಯ 70 ವರ್ಷದ ವೃದ್ಧೆಗೆ ಸೋಂಕು ದೃಢಪಟ್ಟಿದೆ.

ಶಿಗ್ಗಾಂವಿ ಪಟ್ಟಣದ ಎಪಿಎಂಸಿ ಹತ್ತಿರ ವಾಸವಾಗಿದ್ದ 57 ವರ್ಷದ ಪುರುಷನಿಗೆ, ಮಲ್ಲಿಕಾರ್ಜುನ ನಗರದ 30 ವರ್ಷದ ಮಹಿಳೆಗೆ ಐಎಲ್​ಐ ಲಕ್ಷಣದಿಂದ ಸೋಂಕು ತಗುಲಿದೆ.

ಇಬ್ಬರ ಸಾವು: ಹಾವೇರಿ ಮೆಹಬೂಬ ನಗರದ 62 ವರ್ಷದ ಪುರಷ ಸಾರಿ(ಶೀತ, ನೆಗಡಿ, ವಿಪರೀತ ಜ್ವರ) ಲಕ್ಷಣಗಳಿದ್ದರಿಂದ ಧಾರವಾಡ ಎಸ್​ಡಿಎಂನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ. ಅಲ್ಲಿಯೇ ಸ್ವ್ಯಾಬ್ ಟೆಸ್ಟ್​ಗೆ ಕಳಿಸಲಾಗಿತ್ತು. ವರದಿ ಬರುವ ಮುನ್ನವೇ ಜು. 10ರಂದು ಮೃತಪಟ್ಟಿದ್ದರು. ಇದೀಗ ಪಾಸಿಟಿವ್ ಬಂದಿದೆ. ಕೋವಿಡ್ ನಿಯಮಾವಳಿಯಂತೆ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ರಾಣೆಬೆನ್ನೂರ ಪೀರಜಾದೆ ಗಲ್ಲಿಯ ನಿವಾಸಿ 70 ವರ್ಷ ವೃದ್ಧೆ ಅನಾರೋಗ್ಯದಿಂದ ತಾಲೂಕು ಆಸ್ಪತ್ರೆಗೆ ಜು. 13ರಂದು ದಾಖಲಾಗಿದ್ದರು. ಅಂದೇ ಸ್ವ್ಯಾಬ್ ಟೆಸ್ಟ್​ಗೆ ಕಳಿಸಲಾಗಿತ್ತು. ಜು. 15ರಂದು ಮೃತಪಟ್ಟಿದ್ದಾರೆ. ಜು. 17ರಂದು ಪಾಸಿಟಿವ್ ಬಂದಿದೆ. ಕೋವಿಡ್ ಮಾರ್ಗಸೂಚಿಯಂತೆ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.

13 ಜನ ಗುಣವಾಗಿ ಬಿಡುಗಡೆ: ಜಿಲ್ಲೆಯಲ್ಲಿ ಶನಿವಾರ ಒಟ್ಟು 13 ಜನ ಗುಣವಾಗಿ ಬಿಡುಗಡೆಗೊಂಡಿದ್ದಾರೆ. ಅದರಲ್ಲಿ ಹಾವೇರಿ ತಾಲೂಕಿನ 6, ಶಿಗ್ಗಾಂವಿ ತಾಲೂಕಿನ 3, ಬ್ಯಾಡಗಿ ತಾಲೂಕಿನ ಇಬ್ಬರು, ಹಾನಗಲ್ಲ ಹಾಗೂ ಹಿರೇಕೆರೂರ ತಾಲೂಕಿನ ತಲಾ ಒಬ್ಬರು ಗುಣವಾಗಿ ಬಿಡುಗಡೆಗೊಂಡಿದ್ದಾರೆ.

ಇನ್ನೂ 10 ಜನರಿಗೆ ಪಾಸಿಟಿವ್: ಶನಿವಾರ ಅಧಿಕೃತವಾಗಿ ಘೊಷಣೆಯಾಗಿರುವ 15 ಪ್ರಕರಣಗಳನ್ನು ಹೊರತುಪಡಿಸಿ ಜಿಲ್ಲೆಯ ಶಿಗ್ಗಾಂವಿ ತಾಲೂಕು ತಹಸೀಲ್ದಾರ್ ಹಾಗೂ ಅವರ ಕುಟುಂಬದ ಐವರು ಸೇರಿ ಒಟ್ಟು 6 ಜನರಿಗೆ, ರಾಣೆಬೆನ್ನೂರ ತಾಲೂಕು ಆಸ್ಪತ್ರೆಯ ಪ್ರಥಮ ದರ್ಜೆ ಸಹಾಯಕ, ಹೆರಿಗೆ ನರ್ಸ್ ಸೇರಿ ನಾಲ್ವರಿಗೆ ಶನಿವಾರವೇ ಸೋಂಕು ದೃಢಪಟ್ಟಿದೆ. ಆದರೆ, ತಾಂತ್ರಿಕ ಕಾರಣದಿಂದ ಬೆಂಗಳೂರು ಆರೋಗ್ಯ ಇಲಾಖೆಯವರು ಪೇಶೆಂಟ್ ನಂಬರ್ ನೀಡದೇ ಇರುವ ಹಿನ್ನೆಲೆಯಲ್ಲಿ ಈ 10 ಸೋಂಕಿತರ ವಿವರ ಇಂದಿನ ಆರೋಗ್ಯ ಇಲಾಖೆಯ ಬುಲೆಟಿನ್​ನಲ್ಲಿ ಬಂದಿಲ್ಲ. ಆದರೆ, ಅವರೆಲ್ಲರನ್ನು ಚಿಕಿತ್ಸೆಗಾಗಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net