

ಶಿರಸಿ: ಮಾ. 3ರಿಂದ ನಡೆಯುವ ಮಾರಿಕಾಂಬಾ ಜಾತ್ರೆಗೆ ಸಿದ್ಧತೆಗಳು ಭರದಲ್ಲಿ ನಡೆದಿವೆ. ದೇವಾಲಯಕ್ಕೆ ಅಂತಿಮ ಸುತ್ತಿನ ಬಣ್ಣ ಬಳಿಯುವ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ದೇವಾಲಯದೆದುರು ರಥ ಕಟ್ಟುವ ಕಾರ್ಯ ಆರಂಭವಾಗಿದೆ. ಜಾತ್ರೆಗೆ ದಿನಗಣನೆ ಆರಂಭವಾಗಿದ್ದು, ಇಡೀ ನಗರಕ್ಕೆ ಹೊಸ ಕಳೆ ಬಂದಿದೆ.
ದೇವಾಲಯದ ಮುಂಭಾಗ ದಲ್ಲಿ ದೇವಿಯ ರಥ ಕಟ್ಟುವ ಕಾರ್ಯ ಪ್ರಾರಂಭವಾಗಿದೆ. ವಾರದ ಹಿಂದೆಯೇ ಈಶ್ವರ ದೇವಾಲಯದ ಪಕ್ಕದಲ್ಲಿ ಎಣ್ಣೆ ಹಾಕಿ ಹದಗೊಳಿಸಿರುವ ರಥದ ಗಾಲಿಗಳನ್ನು ತಂದು ಜೋಡಿಸಲಾಗಿದೆ. ಬಿಕನಳ್ಳಿ ಮಾಲ್ಕಿ ಜಮೀನಿನಿಂದ ತಂದಿರುವ ತಾರೆ ಮರದ ದಿಮ್ಮಿ ಬಳಸಿ ದೇವಿ ಆಸೀನಳಾಗುವ ಹಲಗೆಯನ್ನು ಆಚಾರಿ ಬಾಬುದಾರರು ಸಿದ್ಧಪಡಿಸುತ್ತಿದ್ದಾರೆ. ಜಾತ್ರೆಗೆ ಏಳು ದಿನಗಳ ಮೊದಲು ರಥ ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ಬಾಬುದಾರ ಆಚಾರಿಗಳು, ಬಡಿಗೇರರು, ಉಪ್ಪಾರರು ತಳಭಾಗದ ಜೋಡಣಾ ಕಾರ್ಯ ನಡೆಸಿದರೆ, ರಥದ ಮೇಲ್ಭಾಗಕ್ಕೆ ಅಡಿ ದಬ್ಬೆಯನ್ನು ಹಗ್ಗದಿಂದ ಬಿಗಿಯುವ, ಅದಕ್ಕೆ ವಾಟೆ ಬಿದಿರನ್ನು ಕಟ್ಟಿ ಪತಾಕೆ ಜೋಡಿಸುವ ಕೆಲಸವನ್ನು ಬಂಡಲ ಭಾಗದ ಮರಾಠಿಗರು ಮಾಡುತ್ತಾರೆ.
ಮಾರಿಕೋಣ ಸಂಚಾರ: ಹಾನಗಲ್, ಹಾವೇರಿ, ಮುಂಡಗೋಡ ಭಾಗದಿಂದ ಬರುವ ಲಂಬಾಣಿ ಜನಾಂಗದವರು ದೇವಾಲಯದಲ್ಲಿರುವ ಮಹಿಷನಲ್ಲಿ ಮಾರಮ್ಮನ ಅವತಾರವನ್ನು ಕಾಣುತ್ತಾರೆ! ಕಂಕಣ ಕಟ್ಟಿರುವ ಮಾರಿಕೋಣ ಕಳೆದೆರಡು ದಿನಗಳಿಂದ ನಗರ ಸಂಚಾರ ನಡೆಸುತ್ತಿದೆ. ಮಾರಿಕಾಂಬೆಯ ಪತಿ ಎನ್ನಲಾಗುವ ಮಾರಿಕೋಣವನ್ನು ಮೇತ್ರಿ ಕುಟುಂಬದ ಪ್ರಮುಖರು ನಗರದ ಎಲ್ಲ ಗಲ್ಲಿಗಳಿಗೆ ಕರೆದೊಯ್ಯುತ್ತಿದ್ದಾರೆ. ಪ್ರತಿ ಮನೆಯಲ್ಲಿ ಮಹಿಳೆಯರು ಕೋಣನಿಗೆ ಎಣ್ಣೆ ಹಾಕಿ, ಅರಿಸಿನ-ಕುಂಕುಮ ಹಾಕಿ, ಆಹಾರ ನೀಡಿ ಮುಂದೆ ಕಳುಹಿಸುತ್ತಾರೆ.
2ನೇ ದಿನ 64 ಪ್ಲಾಟ್ ಹರಾಜು: ಮಾರಿಕಾಂಬಾ ದೇವಿಯ ಜಾತ್ರೆಗೆ ಬಿಡ್ಕಿ ಬೈಲ್ ಸುತ್ತಮುತ್ತ ಎರಡನೇ ದಿನದ ಹರಾಜು ಪ್ರಕ್ರಿಯೆ ಶುಕ್ರವಾರ ನಡೆಯಿತು. ಒಟ್ಟು 64 ಪ್ಲಾಟ್ಗಳಿಂದ ಜಿಎಸ್ಟಿ ಮೊತ್ತ ಹೊರತುಪಡಿಸಿ 39.71 ಲಕ್ಷ ರೂ. ದೇವಾಲಯಕ್ಕೆ ಆದಾಯ ಬಂದಿದೆ.
ಬೆಳಗ್ಗೆ 9 ಗಂಟೆಯಿಂದ ಆರಂಭವಾದ ಹರಾಜು ಪ್ರಕ್ರಿಯೆ ಸಂಜೆ 5 ಗಂಟೆಯವರೆಗೂ ನಿರಂತರವಾಗಿ ನಡೆಯಿತು. ಜಾತ್ರಾ ಚಪ್ಪರದ ಸುತ್ತಮುತ್ತ, ಬಸ್ ನಿಲ್ದಾಣ ಸುತ್ತ ಒಟ್ಟೂ 64 ಪ್ಲಾಟ್ಗಳನ್ನು ಹರಾಜು ಮಾಡಲಾಯಿತು. 1010 ಅಳತೆಯ ಪ್ರತಿ ಪ್ಲಾಟ್ಗೆ ಗರಿಷ್ಠ 2 ಲಕ್ಷ ರೂ.ಗಳವರೆಗೆ ಆಸಕ್ತರು ಹರಾಜು ಕೂಗಿದರು. ದೇವಾಲಯದ ಧರ್ಮದರ್ಶಿ ಮಂಡಲಕಿ ಅಧ್ಯಕ್ಷ ವೆಂಕಟೇಶ ನಾಯ್ಕ, ಉಪಾಧ್ಯಕ್ಷ ಮನೋಹರ ಮಲ್ಮನೆ, ಧರ್ಮದರ್ಶಿಗಳಾದ ಲಕ್ಷ್ಮಣ ಕಾನಡೆ, ಶಾಂತಾರಾಮ ಹೆಗಡೆ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.
22 ಸಿಸಿ ಕ್ಯಾಮರಾ, 400ಕ್ಕೂ ಅಧಿಕ ಸಿಬ್ಬಂದಿ ನೇಮಕ: ಕಾರವಾರ: ಶಿರಸಿ ಜಾತ್ರೆಗೆ 400 ಕ್ಕೂ ಅಧಿಕ ಸಿಬ್ಬಂದಿ ನೇಮಿಸಿಕೊಳ್ಳಲಾಗುತ್ತಿದೆ ಎಂದು ಎಸ್ಪಿ ಶಿವಪ್ರಕಾಶ ದೇವರಾಜು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 3 ಡಿಎಸ್ಪಿ, 10 ಇನ್ಸ್ಪೆಕ್ಟರ್, 30 ಪಿಎಸ್ಐ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುವರು. ಎರಡು ಕೆಎಸ್ಆರ್ಪಿ ತುಕಡಿ ಕಳಿಸಲು ಕೇಂದ್ರ ಕಚೇರಿಗೆ ಪತ್ರ ಬರೆಯಲಾಗಿದೆ. 8 ಡಿಎಆರ್ ತುಕಡಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ಸದ್ಯ ಶಿರಸಿ ನಗರದಲ್ಲಿ 12 ಸಿಸಿ ಕ್ಯಾಮರಾ ಇದ್ದು, ಹೆಚ್ಚುವರಿಯಾಗಿ 10 ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಜಾತ್ರೆಯಲ್ಲಿ ದೂರು ನೀಡಲು ವೆಬ್ಸೈಟ್ ಮೂಲಕ ಅವಕಾಶ ಮಾಡಿಕೊಡುವ ಬಗ್ಗೆ ಪ್ರಯತ್ನ ನಡೆದಿದೆ. ಅದರಲ್ಲೇ ವಿವರಗಳನ್ನೂ ಅಪ್ಲೋಡ್ ಮಾಡಲಾಗುವುದು ಎಂದರು.
ಡ್ರೋನ್ ಹಾರಾಟ ಪರಿಶೀಲನೆ: ಡ್ರೋನ್ ಹಾರಿಸಲು ನಿರ್ಬಂಧವಿದೆ. ಹಾರಿಸುವುದಿದ್ದರೆ ಅದಕ್ಕೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಅರ್ಜಿ ಸಲ್ಲಿಸಿದಲ್ಲಿ ಪರಿಶೀಲಿಸಿ, ಸಾಧ್ಯವಿದ್ದಲ್ಲಿ ತಕ್ಷಣ ಅನುಮತಿ ನೀಡಲಾಗುವುದು ಎಂದು ಎಸ್ಪಿ ತಿಳಿಸಿದರು.