

ಶಿರಸಿ: ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ ಅಪರಾಧಿಗಳಿಗೆ ಶಿರಸಿ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯವು ಮೂರು ವರ್ಷ ಸಾದಾ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ.
ಮುಂಡಗೋಡ ತಾಲೂಕಿನ ಗುಂಜಾವತಿ ಗ್ರಾಮದ ಶಬ್ಬೀರ್ ಸತ್ತಾರಸಾಬ್ ಮಸ್ತಾಮದ್ದಾನಿ ಮತ್ತು ಮೌಲಾಲಿ ಸತ್ತಾರಸಾಬ್ ಮಸ್ತಾಮದ್ದಾನಿ ಶಿಕ್ಷೆಗೊಳಗಾದವರು.
ಮೌಲಾಲಿ ಪೀರ್‌ಸಾಬ್ ಸೈಯ್ಯದ್ ಎಂಬುವವರು 2019 ರ ಸೆ. 2 ರಂದು ಮುಂಡಗೋಡ-ಯಲ್ಲಾಪುರ ರಸ್ತೆಯ ಬಂಕಾಪುರ ಹೋಟೆಲ್ ಎದುರು ತಾವು ನೀಡಿದ ಹಣವನ್ನು ವಾಪಸ್ ಕೇಳಲು ಮುಂದಾದಾಗ ಇಬ್ಬರು ಅಪರಾಧಿಗಳು ಅವರ ಮೇಲೆ ಹಲ್ಲೆ ನಡೆಸಿದ್ದರು.
ಪ್ರಕರಣ ದಾಖಲಿಸಿಕೊಂಡ ಮುಂಡಗೋಡ ಠಾಣೆಯ ಪಿಎಸ್‌ಐ ಪ್ರೇಮನಗೌಡ ಪಾಟೀಲ ತನಿಖೆ ಮಾಡಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಶಿರಸಿಯ 1ನೇ.ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ಕಿರಣ ಕಿಣಿ ಅವರು ತೀರ್ಪು ನೀಡಿದ್ದಾರೆ.
ಇಬ್ಬರಿಗೂ ತಲಾ 1 ಸಾವಿರ ರೂ. ದಂಡ ವಿಧಿಸಿದ್ದಾರೆ. ಅಲ್ಲದೆ, ಇಬ್ಬರೂ ಗಾಯಾಳುವಿಗೆ ತಲಾ 2 ಸಾವಿರ ರೂ.ಗಳನ್ನು ನೀಡುವಂತೆ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ ಮಳಗಿಕರ್ ಅವರು ವಾದ ಮಂಡಿಸಿದ್ದರು.