ಶಿರಾದಲ್ಲಿ 15 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರಕ್ಕೆ ಜನಾದೇಶ ಶುರು

shira by election
Published on

ಶಿರಾ: ಉಪಚುನಾವಣೆಗೆ ಬೆಳಗ್ಗೆ 7 ರಿಂದ ಮತದಾನ ಆರಂಭವಾಗಿದೆ. ಕರೊನಾ ಮಾರ್ಗಸೂಚಿಯಂತೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.  ಒಟ್ಟು 330 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 6 ಅತಿಸೂಕ್ಷ್ಮ, 64 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. 2,15,725 ಮತದಾರರು ಹಕ್ಕನ್ನು ಹೊಂದಿದ್ದಾರೆ. 1,10,281 ಪುರಷರು, 1,05,434 ಮಹಿಳೆಯರು ಹಾಗೂ ಇತರೆ 10 ಮತದಾರರಿದ್ದಾರೆ. ಸಂಜೆ 6 ರವರೆಗೆ ಮತದಾನಕ್ಕೆ ಅವಕಾಶ ಇರಲಿದೆ.

15 ಕಲಿಗಳು ಕಣದಲ್ಲಿ: ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ, ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್‌ಗೌಡ ಸೇರಿದಂತೆ 15 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಲಿದೆ.

1588 ಮತಗಟ್ಟೆ ಸಿಬ್ಬಂದಿ: ಶಿರಾ ವಿಧಾನಸಭಾ ಉಪ ಚುನಾವಣೆ ಮತದಾನಕ್ಕೆ ತುಮಕೂರು ಹಾಗೂ ಗುಬ್ಬಿ ತಾಲೂಕುಗಳಿಂದ 397 ಪ್ರಿಸೈಡಿಂಗ್ ಅಧಿಕಾರಿಗಳು ಸೇರಿದಂತೆ 1588 ಮತಗಟ್ಟೆ ಸಿಬ್ಬಂದಿ ನೇಮಿಸಲಾಗಿದೆ.

ಭದ್ರತಾ ಸಿಬ್ಬಂದಿ: 2 ಡಿವೈಎಸ್‌ಪಿ, 5 ಮಂದಿ ಇನ್ಸ್‌ಪೆಕ್ಟರ್, 21 ಪಿಎಸ್‌ಐ, 19 ಎಎಸ್‌ಐ ಸೇರಿದಂತೆ 900ಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಕೇಂದ್ರದ 3 ಭದ್ರತಾ ಸಿಬ್ಬಂದಿ ಕಂಪನಿಗಳನ್ನು ಸಹ ಬಳಸಿಕೊಳ್ಳಲಾಗುತ್ತಿದೆ. ಹೋಬಳಿವಾರು 5 ಇನ್ಸ್‌ಪೆಕ್ಟರ್‌ಗಳ ತಂಡ ರೌಂಡ್ಸ್‌ನಲ್ಲಿರಲಿದೆ. ಕ್ಷೇತ್ರವು ಆಂಧ್ರಪ್ರದೇಶದ ಗಡಿ ಹಂಚಿಕೊಂಡಿದ್ದು ವ್ಯಾಪಕ ಕಟ್ಟೆಚ್ಚರವನ್ನು ಕೈಗೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net