ರಾಜ್ಯದಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಪೂರಕ ಯೋಜನೆ : ಸಚಿವ ಕೆ.ಜೆ. ಜಾರ್ಜ್

Engineers day - 1
Published on

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ವಿದ್ಯುತ್ ಬೇಡಿಕೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದನೆಗೆ ಪೂರಕ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ಸರ್. ಎಂ. ವಿಶ್ವೇಶ್ವರಯ್ಯ ಅವರ 163ನೇ ಜನ್ಮದಿನಾರಣೆ ಮತ್ತು ಇಂಜಿನಿಯರ್‌ಗಳ ದಿನದ ಪ್ರಯುಕ್ತ ಕರ್ನಾಟಕ ವಿದ್ಯುತ್ ಮಂಡಳಿ ಇಂಜಿನಿಯರುಗಳ ಸಂಘದಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೋವಿಡ್ ಕಾರಣದಿಂದಾಗಿ ವಿದ್ಯುತ್ ಬೇಡಿಕೆ ಕಡಿಮೆಯಾಗಿತ್ತು, ಹಾಗಾಗಿ ಆಗ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಿರಲಿಲ್ಲ. ಈಗ ಆರ್ಥಿಕ ಚಟುವಟಿಕೆ ಗರಿಗೆದರಿದ್ದು, ವಿದ್ಯತ್‌ಗೆ ಬೇಡಿಕೆ ಹೆಚ್ಚಿದೆ. ಹಾಗಾಗಿ ಅಗತ್ಯತೆಗೆ ಅನುಗುಣವಾಗಿ ನವೀಕರಿಸಬಹುದಾದ ಉತ್ಪನ್ನಗಳ ಬಳಕೆಗೆ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.

ಇಂಧನ ಇಲಾಖೆಯಲ್ಲಿ ಉತ್ತಮ ಅಧಿಕಾರಿಗಳು ಇದ್ದು, ಬಹಳಷ್ಟು ಉತ್ತಮ ಕೆಲಸಗಳು ನಡೆಯುತ್ತಿವೆ. ಈ ಬಾರಿ ಮಳೆಯ ಕೊರತೆಯಿಂದ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ಈ ಹಿನ್ನಲೆಯಲ್ಲಿ ಸೋಲಾರ್ ಮತ್ತು ವಿಂಡ್ ಎನರ್ಜಿಯ ಮೂಲಕ ವಿದ್ಯುತ್ ಉತ್ಪಾದನೆಗೆ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇವುಗಳ ಬಳಕೆಯಿಂದ ಅಗತ್ಯ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ. ಸಬ್ ಸ್ಟೇಷನ್‌ಗಳ ಪಕ್ಕ ಸೋಲಾರ್ ಎನರ್ಜಿ ಉತ್ಪಾದನೆ ಮಾಡುವ ನಿಟ್ಟಿನಲ್ಲಿ ಯೋಜನೆಗಳು ಪ್ರಾರಂಭವಾಗಿದ್ದು, 2500 ಮೆಗಾವ್ಯಾಟ್ ನ ಯೋಜನೆ ಕುರಿತು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲು ಸಿದ್ಧತೆ ನಡೆದಿದೆ. ಈ ಎಲ್ಲಾ ಯೋಜನೆಗಳನ್ನು ಪ್ರಾರಂಭಿಸಿದರೆ ಮುಂದಿನ ದಿನಗಳಲ್ಲಿ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಇಲಾಖೆ ಸಮರ್ಥವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಾಂದ ಸರಸ್ವತಿ ಸ್ವಾಮೀಜಿ, ಇಂಧನ ಇಲಾಖೆಯ ಕಾರ್ಯದರ್ಶಿಗ ಗೌರವ್ ಗುಪ್ತಾ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಕರ್ನಾಟಕ ವಿದ್ಯುತ್ ಮಂಡಳಿ ಇಂಜಿನಿಯರುಗಳ ಸಂಘ ಅಧ್ಯಕ್ಷ ಕೆ.ಶಿವಣ್ಣ ಮತ್ತು ಪ್ರಧಾನ ಕಾರ್ಯದರ್ಶಿ ಟಿ.ಎನ್ ಸುಧಾಕರ್ ರೆಡ್ಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net