ಜವಳಗೇರಾ-ಬಳಗಾನೂರು ರಸ್ತೆ ಅಭಿವೃದ್ಧಿ ಯಾವಾಗ..?

RASTE
ಸಿಂಧನೂರು ತಾಲೂಕಿನ ಜವಳಗೇರಾದಿಂದ ಬಳಗಾನೂರು ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿರುವುದು.
Published on

ಸಿಂಧನೂರು: ತಾಲೂಕಿನ ಜವಳಗೇರಾದಿಂದ ಬಳಗಾನೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹದೆಗೆಟ್ಟಿದ್ದು, ಇದರಿಂದ ಜನರು ಸಂಚರಿಸಲು ಹರಸಾಹಸ ಪಡುವಂತಾಗಿದೆ.

ಜವಳಗೇರಾದ ನೀರಾವರಿ ಇಲಾಖೆ ಬಳಿಯ ಕ್ರಾಸ್‌ನಿಂದ ಸುಲ್ತಾನಪುರ, ಜಂಗಮರಹಟ್ಟಿ, ಗೌಡನಬಾವಿ, ಲಕ್ಷ್ಮೀಕ್ಯಾಂಪ್ ಮೂಲಕ ಬಳಗಾನೂರು ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಕಳೆದ ವರ್ಷದಿಂದ ರಸ್ತೆ ಸಂಪೂರ್ಣ ಹಾಳಾಗಿದೆ.

ಡಾಂಬರ್ ಕಿತ್ತಿ ಹೋಗಿ ಆಳೆತ್ತರದ ತೆಗ್ಗುದಿನ್ನೆಗಳು ನಿರ್ಮಾಣಗೊಂಡಿವೆ. ಒಟ್ಟು 12 ಕಿಮೀ ಅಂತರ ಈ ರಸ್ತೆಯಿಂದ ಹೆಚ್ಚಿನ ಉಪಯೋಗವಿದೆ. ಬಳಗಾನೂರಿಗೆ ತೆರಳಲು ಸಿಂಧನೂರಿನಿಂದ ಮಸ್ಕಿಗೆ ಹೋಗಿ ಅಲ್ಲಿಂದ 12 ಕಿಮೀ ಕ್ರಮಿಸಬೇಕಿದೆ. ಆದರೆ ಜವಳಗೇರಾ-ಬಳಗಾನೂರು ಮಾರ್ಗವಾದರೆ ಬರಿ 12 ಕಿ.ಮೀ. ಅಂತರದಲ್ಲಿ ಮತ್ತು ಬಹುಬೇಗನೆ ಊರು ಸೇರಹುದಾಗಿದೆ.

ರಸ್ತೆಯಲ್ಲಿ ಮಳೆಯಿಂದ ನೂರಾರು ಗುಂಡಿಗಳು ಬಿದಿದ್ದು, ಇದರಿಂದ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಬಹುತೇಕ ಗ್ರಾಮಗಳಿಗೆ ಸರಳ ಸಂಪರ್ಕ ಕಲ್ಪಿಸುವ ಈ ರಸ್ತೆ ಅಭಿವೃದ್ಧಿಯನ್ನು ಮರೆಯಲಾಗಿದೆ. ಇದುವರೆಗೂ ಅನುದಾನ ಒದಗಿಸಿಲ್ಲ.

ರಸ್ತೆಯ ಎರಡೂ ಬದಿಯಲ್ಲಿ ಜಾಲಿ ಬೆಳೆದಿದ್ದು, ಸಂಜೆಯಾದರೆ ಓಡಾಡಲು ಭಯ ಪಡುವಂತಾಗಿದೆ. ರಸ್ತೆಯ ರಗ್ಗುಗಳಲ್ಲಿ ಮಳೆ ನೀರು ನಿಂತಿದ್ದು, ದಾರಿಯ ಸ್ಥಿತಿ ಹೇಗೆಂಬುದೇ ತಿಳಿಯದಾಗಿದೆ. ಈ ಹದೆಗೆಟ್ಟ ರಸ್ತೆಯಲ್ಲೇ ಬಸ್ ಓಡಿಸಲಾಗುತ್ತಿದೆ.

ರಸ್ತೆ ಸರಿ ಇಲ್ಲದಿರುವುದರಿಂದ ಚಾಲಕರು ಬಸ್ ಓಡಿಸಲು ಹಿಂಜರಿಯುವಂತಾಗಿದೆ. ಲೋಕೋಪಯೋಗಿ ಇಲಾಖೆ ಕೂಡಲೇ ರಸ್ತೆ ಪ್ರಗತಿಗೆ ಮುಂದಾಗಬೇಕು ಎಂಬುದು ನಾಗರಿಕರ ಒತ್ತಾಸೆಯಾಗಿದೆ.

ಜವಳಗೇರಾ-ಬಳಗಾನೂರು ರಸ್ತೆಯನ್ನು ಈ ಹಿಂದೆ ಸುಧಾರಣೆ ಮಾಡಲಾಗಿತ್ತು. ಮಳೆಯಿಂದ ಹಾಳಾಗಿದ್ದು, ದುರಸ್ತಿಗೆ ಕ್ರಮಕೈಗೊಳ್ಳಲಾಗುವುದು. ಶಾಶ್ವತ ಸುಧಾರಣೆಗೆ ಮುಂದಿನ ದಿನಗಳಲ್ಲಿ ಅಗತ್ಯ ಅನುದಾನಕ್ಕೆ ಪತ್ರ ಬರೆಯಲಾಗುವುದು.ಸಿ.ಎಸ್.ಪಾಟೀಲ್ಎಇಇ, ಲೋಕೋಪಯೋಗಿ ಇಲಾಖೆ, ಸಿಂಧನೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net