More

    ಸಂಪಾದಕೀಯ| ಮುನ್ನೆಚ್ಚರಿಕೆ ಅಗತ್ಯ: ಮುಂಗಾರು ಮಳೆ ಕೊರತೆ; ಕುಡಿಯುವ ನೀರಿಗೂ ಅಭಾವ

    ರಾಜ್ಯದಲ್ಲಿ ಮುಂಗಾರುಪೂರ್ವ ಹಾಗೂ ಆರಂಭಿಕ ಮುಂಗಾರು ಮಳೆ ಪ್ರಮಾಣವು ಸರಾಸರಿಗಿಂತ ಸಾಕಷ್ಟು ಕಡಿಮೆಯಾಗಿರುವುದು ಆತಂಕಕ್ಕೆ ಕಾರಣವಾಗಿದ್ದು, ಬರದ ಭೀತಿಯನ್ನು ಸೃಷ್ಟಿಸಿದೆ. ಮಳೆ ಅಭಾವದಿಂದಾಗಿ ರಾಜ್ಯದ ಅನೇಕ ಕಡೆಗಳಲ್ಲಿ ಬಿತ್ತನೆ ಪ್ರದೇಶ ವ್ಯಾಪಕವಾಗಿ ಕುಂಠಿತವಾಗಿದೆ. ಸಾಕಷ್ಟು ಸಂಖ್ಯೆಯ ರೈತರು ಮುಂಗಾರು ಬೆಳೆಗಳ ಬಿತ್ತನೆಯನ್ನು ಕೈಗೊಳ್ಳದೆ ಹಿಂಗಾರು ಹಂಗಾಮಿನಲ್ಲಾದರೂ ಮಳೆರಾಯ ಕೃಪೆ ತೋರಲಿ ಎಂಬ ನಿರೀಕ್ಷೆಯಲ್ಲಿದ್ದಾರೆ. ‘ಭಾರತದ ಕೃಷಿಯನ್ನು ಮುಂಗಾರು ಜತೆಗಿನ ಜೂಜು’ ಎನ್ನುವ ನಾಣ್ಣುಡಿಯ ವಾಸ್ತವ ಈಗ ಗೋಚರಿಸುತ್ತಿದೆ. ಮಳೆ ಅಭಾವದಿಂದಾಗಿ ಮುಂದಿನ ದಿನಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೂ ಕೊರತೆ ಉಂಟಾಗುವ ಚಿತ್ರಣವು ಗೋಚರಿಸುತ್ತಿದೆ.

    ರಾಜ್ಯದಲ್ಲಿ ಜನವರಿಯಿಂದ ಇದುವರೆಗೆ 332 ಮಿಲಿ ಮೀಟರ್ ಮಳೆಯಾಗಿದ್ದು, ವಾಡಿಕೆಗಿಂತ ಶೇಕಡಾ 28ರಷ್ಟು ಕಡಿಮೆ ಇರುವುದು ಕಳವಳಕಾರಿ ಸಂಗತಿಯಾಗಿದೆ. ರಾಜ್ಯದ 21 ಜಿಲ್ಲೆಗಳ 100 ತಾಲೂಕುಗಳು ಮಳೆ ಕೊರತೆ ಅನುಭವಿಸಿವೆ. ಮಲೆನಾಡಿನ ಪ್ರದೇಶದಲ್ಲಿ ಕೂಡ ಮಳೆ ಅಭಾವ ಉಂಟಾಗಿರುವುದು ಬರದ ಆತಂಕವನ್ನು ಸೃಷ್ಟಿಸಿದೆ. ನೀರಿನ ಒಳಹರಿವಿನ ಅಭಾವದಿಂದಾಗಿ ಪ್ರಮುಖ ಜಲಾಶಯಗಳ ನೀರಿನ ಸಂಗ್ರಹ ಮಟ್ಟ ಸಾಕಷ್ಟು ಕುಸಿದಿದೆ.

    ಹಿಂದಿನ ವರ್ಷಕ್ಕೆ ಹೋಲಿಸಿದರೆ ಬಹುತೇಕ ಜಲಾಶಯಗಳ ನೀರಿನ ಸಂಗ್ರಹ ಅಪಾರ ಪ್ರಮಾಣದಲ್ಲಿ ಇಳಿಮುಖವಾಗಿದೆ. ರಾಜ್ಯದ ದೊಡ್ಡ ಅಣೆಕಟ್ಟಾದ ಲಿಂಗನಮಕ್ಕಿಯಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 72.61 ಟಿಎಂಸಿ ಅಡಿ ನೀರಿದ್ದರೆ ಈಗ ಅದು ಬರೀ 22.94 ಟಿಎಂಸಿಗೆ ಕುಸಿದಿದೆ. ಉಳಿದ ಜಲಾಶಯಗಳ ಪರಿಸ್ಥಿತಿಯೂ ಭಿನ್ನವಾಗಿಲ್ಲ. ವಿದ್ಯುತ್ ಉತ್ಪಾದನೆಯೂ ಸ್ಥಗಿತಗೊಂಡಿದೆ. ನದಿ, ಕೆರೆ, ಹಳ್ಳ ಮುಂತಾದ ನೀರಿನ ಮೂಲಗಳಲ್ಲಿ ಕೊರತೆ ಎದ್ದುಕಾಣುತ್ತಿದೆ. ಎಲ್ಲೆಡೆ ಅಂತರ್ಜಲ ಮಟ್ಟವೂ ಕುಸಿಯತೊಡಗಿದ್ದು, ಕೊಳವೆಬಾವಿಗಳು ಬತ್ತತೊಡಗಿವೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಕೃಷಿ ಮಾತ್ರವಲ್ಲದೆ, ಕುಡಿಯುವ ನೀರಿನ ಸರಬರಾಜಿಗೂ ವ್ಯಾಪಕ ಪ್ರಮಾಣದಲ್ಲಿ ತೊಂದರೆಯಾಗುವ ಸಾಧ್ಯತೆಗಳಿದ್ದು, ಇದರ ಲಕ್ಷಣಗಳು ಈಗಾಗಲೇ ಗೋಚರಿಸುತ್ತಿವೆ.

    ಕುಡಿಯುವ ನೀರಿನ ಬವಣೆಯ ಸವಾಲು ಎದುರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದು, ಸಚಿವ ಕೃಷ್ಣ ಬೈರೇಗೌಡ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪಸಮಿತಿ ಸಭೆಯನ್ನು ಮಂಗಳವಾರ ಆಯೋಜಿಸಲಾಗಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಕುರಿತು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಸಮಸ್ಯೆ ಗಮನಕ್ಕೆ ಬಂದ 24 ಗಂಟೆಯೊಳಗೆ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು.

    ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳೂ ಮುನ್ನೆಚ್ಚರಿಕೆ ವಹಿಸಬೇಕು. ಜಲಜೀವನ್ ಮಿಷನ್ ಮೂಲಕ ನೀರು ಒದಗಿಸಿದ ಗ್ರಾಮಗಳಲ್ಲಿ ತಪಾಸಣೆ ನಡೆಸಿ, ಪೈಪ್​ಲೈನ್​ಗಳನ್ನು ಪರಿಶೀಲಿಸಿ ಸರಿಪಡಿಸಬೇಕು ಎಂಬಿತ್ಯಾದಿ ಮುನ್ಸೂಚನೆಗಳನ್ನು ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಅನುದಾನ ಕೊರತೆ ಇದೆ ಎಂಬ ನೆಪವನ್ನು ಮುಂದೊಡ್ಡಬಾರದು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಮಳೆಯು ಉತ್ತಮವಾಗಿ ಸುರಿಯಬಹುದು ಎಂಬ ಒಂದಿಷ್ಟು ನಿರೀಕ್ಷೆ ಇದೆ. ಆದರೂ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಲು ಎಲ್ಲರೂ ಸಿದ್ಧರಾಗಿರಲೇಬೇಕಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಆಡಳಿತವು ಸಚಿವ ಸಂಪುಟದ ಉಪಸಮಿತಿ ಸಭೆಯಲ್ಲಿ ರ್ಚಚಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಲಭ್ಯ ಜಲ ಸಂಪನ್ಮೂಲಗಳನ್ನು ದಕ್ಷತೆಯಿಂದ ಬಳಸಲು, ಹೊಸ ಜಲ ಸಂಪನ್ಮೂಲಗಳನ್ನು ಶೋಧಿಸಲು ಸರ್ಕಾರ ಗಮನಹರಿಸಬೇಕಿದೆ. ಇದರ ಜತೆಗೆ ಜನರು ಕೂಡ ನೀರನ್ನು ಹಿತಮಿತವಾಗಿ ಬಳಸಲು, ಪೋಲಾಗುವುದನ್ನು ತಡೆಯಲು ಆದ್ಯತೆ ನೀಡಬೇಕಿದೆ.

    VIRAL VIDEO| ಈ ನಂದಿ ವಿಗ್ರಹ ನಿಜಕ್ಕೂ ನೀರು ಕುಡಿಯುತ್ತಿದೆಯಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts