

ಸಿಂಧನೂರು: ಒಂದೆಡೆ ಬರಡು ನೆಲಕ್ಕೆ ನೀರು ಹರಿಯುತ್ತದೆ ಎನ್ನುವ ಖುಷಿಗೆ ತಿಮ್ಮಾಪುರ ಏತ ನೀರಾವರಿ ಯೋಜನೆಗೆ ಭೂಮಿ ನೀಡಿದ ರೈತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಈ ಕಾರಣಕ್ಕೆ ರೈತರು ನೀರಾವರಿ ಯೋಜನೆಯನ್ನು ಬಂದ್ ಮಾಡಿದ್ದು ಅತ್ತ ನೀರಾವರಿ ಇಲ್ಲ, ಇತ್ತ ಪರಿಹಾರವಿಲ್ಲ ಎನ್ನುವಂತಾಗಿದೆ.
ತುಂಗಭದ್ರಾ ಎಡದಂಡೆ ನಾಲೆ ವ್ಯಾಪ್ತಿಗೆ ಒಳಪಡುವ 54ನೇ ವಿತರಣಾ ಕಾಲುವೆಯ ಟೇಲೆಂಡ್ ಭಾಗದಲ್ಲಿ ನೀರಿನ ಕೊರತೆ ಕಾರಣದಿಂದ ತೊಂದರೆ ಅನುಭವಿಸುವಂತಾಗಿತ್ತು. ಹೀಗಾಗಿ ಸಾವಿರಾರು ಎಕರೆ ಜಮೀನಿಗೆ ನೀರು ಪೂರೈಸುವ ತಿಮ್ಮಾಪುರ ಏತನೀರಾವರಿ ಯೋಜನೆ ಅನುಷ್ಠಾನಗೊಳ್ಳುವ ಮೂಲಕ 24 ಗ್ರಾಮಗಳ ಅನ್ನದಾತರ ನಾಲ್ಕು ದಶಕಗಳ ಕನಸು ನನಸಾಗಿಸುವ ಉದ್ದೇಶ ಹೊಂದಲಾಗಿತ್ತು. ಆದರೆ ರೈತರಿಗೆ ಯೋಜನೆ ಫಲಪ್ರದವಾಗಿಲ್ಲ.
ಇದನ್ನೂ ಓದಿ: ಇಟಗಿ- ಸಾಸಲವಾಡ ಏತ ನೀರಾವರಿ ಯೋಜನೆಗೆ ಕಾಯಕಲ್ಪ
ತಾಲೂಕಿನ ಒಳಬಳ್ಳಾರಿ ಗ್ರಾಮದ ಪಕ್ಕದ ತುಂಗಭದ್ರಾ ನದಿ ದಂಡೆಯಲ್ಲಿ ತಿಮ್ಮಾಪುರ ಏತನೀರಾವರಿ ಯೋಜನೆಯ ಪಂಪ್‌ಹೌಸ್ ನಿರ್ಮಿಸಿದ್ದು, 97 ಕೋಟಿ ರೂ. ಖರ್ಚು ಮಾಡಲಾಗಿದೆ. 24 ಗ್ರಾಮಗಳ ಅಚ್ಚುಕಟ್ಟು ಪ್ರದೇಶದ 34,948 ಎಕರೆ ಜಮೀನುಗಳಿಗೆ ನೀರುಣಿಸುವ ಗುರಿ ಹೊಂದಿದ್ದು, 90 ಕ್ಯೂಸೆಕ್ ನೀರನ್ನು ಹರಿಸುವ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ಯೋಜನೆಯಿಂದ ಹಲವು ದಶಕಗಳಿಂದ ಎಡದಂಡೆ ನಾಲೆಯ ನೀರಿನಿಂದ ವಂಚಿತವಾದ ರಾಗಲಪರ್ವಿ, ಯದ್ದಲದೊಡ್ಡಿ, ತಿಮ್ಮಾಪುರ, ಆಯನೂರು, ಹೆಡಗಿನಾಳ, ತುರಕಟ್ಟಿ, ಸುಲ್ತಾನಪುರ, ಜವಳಗೇರಾ, ಚಿತ್ರಾಲಿ, ಚಿಂತಮಾನದೊಡ್ಡಿ, ಧುಮತಿ, ಪುಲದಿನ್ನಿ, ಪುಲಮೇಶ್ವರದಿನ್ನಿ ಸೇರಿದಂತೆ ಹಲವು ಗ್ರಾಮಗಳು ನೀರಾವರಿಗೆ ಒಳಪಟ್ಟಿದ್ದವು. 2023ರ ಡಿ.19 ರಂದು ಸಿಎಂ ಸಿದ್ದರಾಮಯ್ಯ ಯೋಜನೆಯನ್ನು ಲೋಕಾರ್ಪಣೆ ಮಾಡಿದ್ದರು. ಇನ್ನೇನು ಯೋಜನೆಯಡಿ ಈ ಭಾಗ ನೀರಾವರಿ ಪ್ರದೇಶವಾಗಲಿದೆ ಎನ್ನುವ ಬೆನ್ನೆಲ್ಲೇ ಭೂ ಸಂತ್ರಸ್ತರಿಗೆ ಪರಿಹಾರ ನೀಡದಿರುವುದರಿಂದ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ.