ಇಟಗಿ- ಸಾಸಲವಾಡ ಏತ ನೀರಾವರಿ ಯೋಜನೆಗೆ ಕಾಯಕಲ್ಪ

09 SRT 1
Published on

ಶಿರಹಟ್ಟಿ: ತಾಲೂಕಿನ ಇಟಗಿ- ಸಾಸಲವಾಡ ಏತ ನೀರಾವರಿ ಯೋಜನೆ ಮಾದರಿಯಾಗಿಸುವ ಕನಸು ನನ್ನದು. ರೈತರ ಹಿತಕ್ಕಾಗಿ ಸರ್ಕಾರದಿಂದ ಮತ್ತಷ್ಟು ಅನುದಾನ ತರಲು ನಿರಂತರ ಪ್ರಯತ್ನಿಸುತ್ತಿದ್ದೇನೆ. ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ತಾಲೂಕಿನ ಇಟಗಿ- ಸಾಸಲವಾಡ ಏತ ನೀರಾವರಿ ಯೋಜನೆಯ ಪಂಪ್‌ಹೌಸ್ ದುರಸ್ತಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಂಗಳವಾರ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿ, ಯೋಜನೆಯ ಪುನರ್ ಚಾಲನೆ ಮೂಲಕ 12 ಗ್ರಾಮಗಳ ಸಾವಿರಾರು ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ. ಇಟಗಿ, ಸಾಸಲವಾಡ, ತಂಗೋಡ, ಕನಕವಾಡ, ಹೆಬ್ಬಾಳ, ತೊಳಲಿ, ಕಲ್ಲಾಗನೂರ, ವಿಠಲಾಪುರ, ಬಸಾಪುರ, ತೆರೆದಹಳ್ಳಿ, ಕರಹಳ್ಳಿ ಸೇರಿ ಒಟ್ಟು 12 ಗ್ರಾಮಗಳ 4,900 ಎಕರೆ (1984 ಹೆಕ್ಟೇರ್) ಜಮೀನಿಗೆ ನೀರಾವರಿ ಸೌಲಭ್ಯ ಲಭ್ಯವಾಗಲಿದೆ ಎಂದು ಹೇಳಿದರು.

ಈ ಯೋಜನೆ 2011ರಲ್ಲಿ ಲೋಕಾರ್ಪಣೆಗೊಂಡಿತ್ತು. ಆದರೆ ನಿರ್ವಹಣಾ ಕೊರತೆ ಹಾಗೂ ಪಂಪ್‌ಹೌಸ್ ತಾಂತ್ರಿಕ ದೋಷದಿಂದಾಗಿ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಈ ಅವಧಿಯಲ್ಲಿ ರೈತರು ನಿರಾಶರಾದರು, ಈ ಭಾಗದ ಅಭಿವೃದ್ಧಿಯೂ ನಿಂತಿತು. ಶಾಸಕನಾದ ನಂತರ ಯೋಜನೆ ಪುನಶ್ಚೇತನಗೊಳಿಸಲು ವಿಶೇಷ ಕಾಳಜಿ ವಹಿಸಿದೆ. ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಉಪಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಪಂಪ್‌ಹೌಸ್ ದುರಸ್ತಿಗೆ ಸರ್ಕಾರದಿಂದ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿಸಲಾಯಿತು. ಇದರ ಫಲವಾಗಿ ನೀರು ಹರಿಯುತ್ತಿದೆ ಎಂದು ಹೇಳಿದರು.

ಪ್ರಸ್ತುತ ಸ್ಥಿತಿ: ಯೋಜನೆ ಈಗ ಕೆಎನ್‌ಎನ್‌ಎಲ್ (ಕರ್ನಾಟಕ ನೀರಾವರಿ ನಿಗಮ ಲಿಮಿಟೆಡ್)ನ ಬೆಂಗಳೂರು ಅಪರ ತುಂಗಾ ವ್ಯಾಪ್ತಿಯ ಮುನಿರಾಬಾದ ವಲಯಕ್ಕೆ ಒಳಪಟ್ಟಿದೆ. ಯೋಜನೆಯ ಯಶಸ್ವಿ ಅನುಷ್ಠ್ಠಾನಕ್ಕಾಗಿ ತಂಗೋಡ, ಇಟಗಿ, ಹೆಬ್ಬಾಳ ಪಂಚಾಯಿತಿಗಳು ಸೇರಿ ಕಾಲುವೆಗಳ ಹೂಳು ತೆಗೆಯುವ ಕಾರ್ಯವನ್ನು ತ್ವರಿತಗೊಳಿಸಬೇಕಿದೆ. ಯೋಜನೆಯ ಪೂರಕ ತುದಿವರೆಗೂ ನಿಭಾಯಿಸುವ ಭರವಸೆ ಇದೆ ಎಂದು ಹೇಳಿದರು.

ಕೆಎನ್‌ಎನ್‌ಎಲ್(ಏಒಒಐ) ಮತ್ತು ನೀರಾವರಿ ಇಲಾಖೆ ಎನ್.ಎಸ್. ರಮೇಶ, ತಹಸೀಲ್ದಾರ್ ಕೆ. ರಾಘವೇಂದ್ರ ರಾವ, ತಾಪಂ ಇಒ ರಾಮಣ್ಣ ದೊಡ್ಡಮನಿ, ಎಸ್.ಎಸ್. ಪಾಟೀಲ, ಶಿವಯೋಗಿ ನಂದಿಬೇವೂರಮಠ, ಮಂಜುನಾಥ ಶಂಕಿನದಾಸರ, ಎಸ್.ಪಿ. ಕಂಠಿಗೌಡ್ರ, ಶಾಂತಣ್ಣ ಬಳ್ಳಾರಿ, ಸುರೇಶ ಬಳ್ಳಾರಿ, ಜಿತು ಪಾಟೀಲ, ಶರಣಪ್ಪಗೌಡ ಪಾಟೀಲ, ಬಸವರಾಜ ಚಕ್ರಸಾಲಿ, ಮಹೇಶಗೌಡ್ರು ತೆಗ್ಗಿನಮನಿ, ನಾಗಯ್ಯ ಗಡ್ಡಿ, ಅಪ್ಪಣ್ಣ ಸಾಲಿ, ಹೇಮಂತ ಕೆಂಗೊಂಡ, ಕುಮಾರ ಕೆಂಗೊಂಡ, ಶಂಕರ ಬಾವಿ, ಜಾನು ಲಮಾಣಿ, ಈಶಪ್ಪ ಹೊನ್ನಪ್ಪನವರ, ಪ್ರವೀಣ ಬಳ್ಳಾರಿ, ಸಿ.ಎಸ್. ಪಾಟೀಲ, ಶಿವನಗೌಡ ಕಂಠಿಗೌಡರ, ಮಲ್ಲಿಕಾರ್ಜುನ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net