

ಸಿಂಧನೂರು: ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಿನ್ನೆಲೆಯಲ್ಲಿ ನನ್ನ ಶಾಲೆ, ನನ್ನ ಕೊಡುಗೆ ಕಾರ್ಯಕ್ರಮದಡಿ ಮೊದಲ ಹಂತದಲ್ಲಿ ತಿಡಿಗೋಳ ಸಿಆರ್‌ಸಿ ಹಾಗೂ ಗುಂಡ ಸಿಆರ್‌ಸಿ ವ್ಯಾಪ್ತಿಯ ಶಾಲೆಗಳಲ್ಲಿನ ಕಪ್ಪು ಹಲಗೆಗೆ ಬಣ್ಣ ಹಚ್ಚುವ ಅಭಿಯಾನವನ್ನು ತಿಡಿಗೋಳ ಸರ್ಕಾರಿ ಪ್ರೌಢ ಶಾಲೆಯಲ್ಲಿ 2003ರಲ್ಲಿ ಅಭ್ಯಾಸ ಮಾಡಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದಾರೆ.
ಜು.31ರಿಂದ ತಿಡಿಗೋಳ ಸಿಆರ್‌ಸಿ ವ್ಯಾಪ್ತಿಯ 17 ಸರ್ಕಾರಿ ಶಾಲೆಗಳು ಹಾಗೂ ಆ.8 ರಿಂದ ಗುಂಡ ಸಿಆರ್‌ಸಿ ವ್ಯಾಪ್ತಿಯ 16 ಶಾಲೆಗಳಲ್ಲಿನ ಕಪ್ಪು ಹಲಗೆಗೆ ಬಣ್ಣ ಹಚ್ಚುವ ಅಭಿಯಾನ ನಡೆಸಲಾಗಿದೆ. ಬಹು ವರ್ಷಗಳಿಂದ ಬಣ್ಣ ಕಾಣದೆ ಹಾಳಾಗಿದ್ದ ಕಪ್ಪು ಹಲಗೆಗೆ ಮರು ಜೀವ ನೀಡುವ ಕೆಲಸ ನಡೆದಿದೆ.
ತಿಡಿಗೋಳ ಸರ್ಕಾರಿ ಪ್ರೌಢ ಶಾಲೆಯಲ್ಲಿ 2003ರಲ್ಲಿ ಅಭ್ಯಾಸ ಮಾಡಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ತಂಡ ಈ ಕಾರ್ಯ ಕೈಗೊಂಡಿದ್ದು ಮುಂದಿನ ಹಂತದಲ್ಲಿ ಬೇರೆ ರೀತಿಯ ಚಟುವಟಿಕೆಗಳು ನಡೆಯಲಿವೆ ಎಂದು ಹಳೆಯ ವಿದ್ಯಾರ್ಥಿ ಬಸನಗೌಡ ಉಪ್ಪಲದೊಡ್ಡಿ ತಿಳಿಸಿದರು.