ಆಧುನಿಕತೆ ಭರಾಟೆಯಲ್ಲಿ ಮರೆಯಾಗುತ್ತಿದೆ ಕುಸ್ತಿ

hnl kusti
Published on

ಹೊನ್ನಾಳಿ: ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಸಂಸ್ಕೃತಿಯ ಕಲೆಗಳಲ್ಲಿ ಒಂದಾದ ಕುಸ್ತಿ ಆಡುವುದಕ್ಕೆ ಯಾರೂ ಮುಂದೆ ಬರುತ್ತಿಲ್ಲ ಎಂದು ಶಾಸಕ ಡಿ.ಜಿ.ಶಾಂತನಗೌಡ ವಿಷಾದಿಸಿದರು.

ದುರ್ಗಾಬಿಕಾ ಹಾಗೂ ಮರಿಯಮ್ಮ ಜಾತ್ರಾ ಮಹೋತ್ಸವದ ಅಂಗವಾಗಿ ಆಂಜನೇಯ ಟ್ರಸ್ಟ್ ಕಮಿಟಿಯಿಂದ ಪಟ್ಟಣದಲ್ಲಿ ಶುಕ್ರವಾರ ನಡೆದ ಬಯಲು ಕಾಟ ಜಂಗಿ ಕುಸ್ತಿ ಸಮಾರೋಪದಲ್ಲಿ ಮಹಿಳಾ ಕುಸ್ತಿಪಟುಗಳಿಗೆ ಬೆಳ್ಳಿಗದೆ ವಿತರಿಸಿ ಮಾತನಾಡಿದರು.

ಕುಸ್ತಿ ಕೇವಲ ಒಂದು ಕ್ರೀಡೆಯಲ್ಲ, ಅದು ಜಾನಪದ ಸಂಸ್ಕೃತಿಯ ಕಲಾ ಪ್ರಕಾರ ಕೂಡ. ಕುಸ್ತಿ ಗೆಲ್ಲಲ್ಲು ದೈಹಿಕ ಶಕ್ತಿಯೊಂದಿಗೆ ಮಾನಸಿಕ ಯುಕ್ತಿಯೂ ಬಹುಮುಖ್ಯ.ಯುವ ಸಮುದಾಯ ಮೊಬೈಲ್ ಗೀಳು ಬಿಟ್ಟು ಇಂತಹ ಜಾನಪದ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಹಿಂದೆ ಗರಡಿ ಮನೆಗಳಲ್ಲಿ ಕುಸ್ತಿ ತಾಲೀಮು ಮಾಡುತ್ತಿದ್ದರಿಂದ ಯುವಜನರು ಯಾವುದೇ ದುಶ್ಚಟಗಳಿಗೆ ಮಾರು ಹೋಗದೆ ತಮ್ಮ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರು. ಇತ್ತೀಚಿಗೆ ಗರಡಿಮನೆಗಳು ನಶಿಸುತ್ತಿದ್ದು, ಗ್ರಾಮೀಣ ಸೊಗಡಿನ ಕುಸ್ತಿ ಆಟವನ್ನು ಆಡುವುದಿರಲಿ ನೋಡಲು ಸಹ ನಿರಾಸಕ್ತಿ ತೋರಿಸುತ್ತಿದ್ದಾರೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ಜಾನಪದ ಕ್ರೀಡೆಗಳು ಆರೋಗ್ಯದ ಜತೆಗೆ ಏಕಾಗ್ರತೆಯನ್ನುಂಟು ಮಾಡುತ್ತವೆ ಎಂದು ಹೇಳಿದರು.

ಪುರಸಭೆ ಸದಸ್ಯ ಧರ್ಮಪ್ಪ ಮಾತನಾಡಿದರು. ಆಂಜನೇಯ ಟ್ರಸ್ಟ್ ಕಮಿಟಿ ಅಧ್ಯಕ್ಷ ನರಸಿಂಹಪ್ಪ, ಯಜಮಾನ್ ರಾಜಪ್ಪ, ಎಚ್.ಬಿ.ಚಿನ್ನ ಪ್ಪ, ಮಹೇಶಣ್ಣ, ರೇವಣಸಿದ್ದಪ್ಪ, ವಿಜಿಗೌಡ, ಬೂದಿ ರವಿ, ಎಂ.ಆರ್. ಮಹೇಶ್, ರಘುಸ್ವಾಮಿ, ಜಗ್ಗುಸ್ವಾಮಿ, ಕುಮಾರ ಸಾಂಗ್ಲಿ, ಯೋಗೀಶ್,ಮಂಜು ಕರವೇ, ಕತ್ತಿಗೆ ನಾಗರಾಜ, ತೀರ್ಪಗಾರರಾದ ಪೈಲ್ವಾನ್ ರಂಗಪ್ಪ, ವಾಜಿದ್, ಸಣ್ಣಸಿದ್ದಪ್ಪ, ಕರಿಸಿದ್ದಪ್ಪ, ಮಂಜು, ಮುನ್ನ ಇತರರು ಇದ್ದರು.

ಕುಸ್ತಿಯಲ್ಲಿ ಗೆದ್ದ ಪ್ರಮುಖರು: ಕೊಲ್ಲಾಪುರದ ಉಮೇಶ್ ಜಾದವ್ ಬೆಳ್ಳಿ ಗದೆ ಹಾಗೂ 25 ಸಾವಿರ ನಗದು ಹಾಗೂ ರೋಷನ್ ಗವಸ್ಪುರ 25 ಸಾವಿರ ನಗದು ಬಹುಮಾನ ಪಡೆದರು. ಉಳಿದ ಕುಸ್ತಿಪಟುಗಳಿಗೆ ನಗದು ಬಹುಮಾನ ನೀಡಲಾಯಿತು.

ಮಹಿಳಾ ಕುಸ್ತಿಯಲ್ಲಿ ಶಿವಮೊಗ್ಗದ ಜಲಜಾಕ್ಷಿ ಪ್ರಥಮ ಸ್ಥಾನ ಪಡೆದರೆ, ಶಿಕಾರಿಪುರದ ಸೃಷ್ಠಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net