

ಭೌಗೋಳಿಕವಾಗಿ ದೊಡ್ಡದಾದ ಜಿಲ್ಲೆಗಳ ವಿಭಜನೆಯಿಂದ ಆಡಳಿತಾತ್ಮಕವಾಗಿ ಅಷ್ಟೇ ಅಲ್ಲ, ಜನರಿಗೆ ಬಹು ಪ್ರಯೋಜನಗಳಾಗಿವೆ ಎಂಬ ಕೂಗು, ಹೋರಾಟ, ಒತ್ತಾಸೆ ಮುಗಿಯದ ಅಧ್ಯಾಯ! ಯೋಜನಾವಾರು ವೆಚ್ಚ, ತಲಾ ಆದಾಯ, ಭೌತಿಕ, ಆರ್ಥಿಕ ಪ್ರಗತಿ, ಜೀವನಮಟ್ಟ ಸುಧಾರಣೆ ದೃಷ್ಟಿಯಿಂದ ಚಿಕ್ಕ ಜಿಲ್ಲೆಗಳು ಪರಿಣಾಮಕಾರಿ, ನಿರೀಕ್ಷಿತ ಫಲ ನೀಡುತ್ತವೆ ಎನ್ನುವುದು ತಜ್ಞರ ಅಭಿಮತ. ಈ ನಿಟ್ಟಿನಲ್ಲಿ ಜೆ.ಎಚ್.ಪಟೇಲ್ ನೇತೃತ್ವದ ಜನತಾದಳ ಸರ್ಕಾರ ತಳೆದ ದೃಢ ರಾಜಕೀಯ ಇಚ್ಛಾಶಕ್ತಿ, ಗಟ್ಟಿ ನಿರ್ಧಾರಗಳು ರಾಜ್ಯದ ಇತಿಹಾಸ ಪುಟದಲ್ಲಿ ಅಚ್ಚಳಿಯದೇ ಉಳಿದಿವೆ. ಹೊಸ ಜಿಲ್ಲೆಗಳ ರಚನೆ ‘ಜೇನುಗೂಡಿಗೆ ಕೈಹಾಕಿದಂತೆ’ ಎಂಬ ಮಾತಿಗೆ ಮುಖ್ಯಮಂತ್ರಿಯಾಗಿ ಜೆ.ಎಚ್.ಪಟೇಲ್ ಬೆದರದೆ ಏಳು ಹೊಸ ಜಿಲ್ಲೆಗಳನ್ನು ಘೋಷಿಸಿದರು. ಮೂಲ ಜಿಲ್ಲೆಗಳಿಂದ ಬೇರ್ಪಟ್ಟು 1997ರ ಆಗಸ್ಟ್ 24ರಂದು ಏಕಕಾಲಕ್ಕೆ ಏಳು ಹೊಸ ಜಿಲ್ಲೆಗಳು ಉದಯಿಸಿ, 2022ರ ಆ.24ಕ್ಕೆ 25 ವಸಂತಗಳು ಪೂರೈಸಿವೆ.
ಇದಾದ ನಂತರವೂ ಯಾದಗಿರಿ, ಇತ್ತೀಚೆಗೆ ವಿಜಯನಗರ ಜಿಲ್ಲೆ ಹೊಸದಾಗಿ ಅಸ್ತಿತ್ವಕ್ಕೆ ಬಂದಿದ್ದು, ರಾಜ್ಯದ ಒಟ್ಟು ಜಿಲ್ಲೆಗಳ ಸಂಖ್ಯೆ 31ಕ್ಕೇರಿದೆ. ಇಷ್ಟಾಗಿಯೂ ಚಿಕ್ಕೋಡಿ, ಗೋಕಾಕ, ಶಿರಸಿ, ಶಿಕಾರಿಪುರ, ಮಧುಗಿರಿ ಹೀಗೆ ಹೊಸ ಜಿಲ್ಲೆಗಳ ಬೇಡಿಕೆ ಸರತಿ ಸಾಲುಗಟ್ಟಿ ನಿಂತಿವೆ.
ರಜತ ಸಂಭ್ರಮದಲ್ಲಿರುವ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿ ಜಿಲ್ಲಾಮಟ್ಟದ ಸರ್ಕಾರಿ ಕಚೇರಿಗಳು, ನ್ಯಾಯಾಲಯ ಸಂಕೀರ್ಣ, ರಸ್ತೆ, ವಿದ್ಯುತ್ ಸೇರಿ ಮೂಲ ಸವಲತ್ತುಗಳ ಅಭಿವೃದ್ಧಿ ಸಹಿತ ಕೆಲಮಟ್ಟಿಗೆ ಭೌತಿಕ ಪ್ರಗತಿಯಾಗಿದೆ. ಕೈಗಾರಿಕಾ ಪ್ರದೇಶ ಸ್ಥಾಪನೆ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಕಂಡಿದ್ದರೂ ನಿರೀಕ್ಷೆಗೆ ಹೋಲಿಸಿದರೆ ಬಹಳ ಕಡಿಮೆ. ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು, ನೀರಾವರಿ ಪ್ರದೇಶ ಸೃಜನೆಗೆ ಇನ್ನಷ್ಟು ಗಮನಹರಿಸಬೇಕಿದೆ. ಗ್ರಾಮೀಣ ಮತ್ತು ನಗರ-ಪಟ್ಟಣಗಳ ಅಭಿವೃದ್ಧಿ ವ್ಯತ್ಯಾಸ ಮುಂದುವರಿದಿದೆ. ತಲಾ ಆದಾಯ, ಯೋಜನಾವಾರು ವೆಚ್ಚ ಹಂಚಿಕೆ, ಕೇಂದ್ರ ಸರ್ಕಾರ ಪುರಸ್ಕೃತ ಯೋಜನೆಗಳಿಗೆ ಪರಿಗಣನೆಯಾಗಬೇಕಿದೆ. ಅಗತ್ಯಕ್ಕೆ ಅನುಗುಣವಾಗಿ ಹೊಸ ತಾಲೂಕು ರಚನೆಯಾಗಿದ್ದು, ಪೂರ್ಣ ಪ್ರಮಾಣದಲ್ಲಿ ಎಲ್ಲ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುವುದು ಬಾಕಿಯಿದೆ.