

ಟಿ.ರಾಮಚಂದ್ರ ಕೊಂಡ್ಲಹಳ್ಳಿ
ಕೈಮಗ್ಗದಲ್ಲಿ ರೇಷ್ಮೆ ಸೀರೆ ನೇಯ್ಗೆಗೆ ಕೊಂಡ್ಲಹಳ್ಳಿ ನಾಡಿನಾದ್ಯಂತ ಹೆಸರಾಗಿತ್ತು. ಇದೀಗ ಈ ಭಾಗದಲ್ಲಿ ಉತ್ಪಾದನೆಯಾದ ರೇಷ್ಮೆಗೂಡು ರಾಮನಗರ ಮಾರುಕಟ್ಟೆಯಲ್ಲಿ ಅತ್ಯುತ್ತಮ ಬೆಲೆಗೆ ಮಾರಾಟವಾದ ಪ್ರಶಂಸೆಗೆ ಪಾತ್ರವಾಗಿದೆ. ಈ ಮೂಲಕ ರೇಷ್ಮೆ ಉದ್ಯಮದಲ್ಲಿ ಮತ್ತೊಂದು ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ಕೊಂಡ್ಲಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 150 ರೇಷ್ಮೆ ಬೆಳೆಗಾರರಿದ್ದು, ತಾಲೂಕಿನ ಇತರ ಗ್ರಾಪಂಗಳಿಗೆ ಹೋಲಿಸಿದರೆ ಇಲ್ಲೇ ಹೆಚ್ಚು ರೇಷ್ಮೆ ಬೆಳೆಗಾರರುಳ್ಳ ಪ್ರದೇಶವೆಂಬ ವಿಶೇಷತೆಗೆ ಪಾತ್ರವಾಗಿದೆ.
ಗ್ರಾಮದ ಎಚ್.ಎನ್.ಮಂಜುನಾಥ್ ಅವರು ಉತ್ಪಾದಿಸಿದ ರೇಷ್ಮೆ ಗೂಡಿಗೆ ರಾಮನಗರದ ವಾರುಕಟ್ಟೆಯಲ್ಲಿ ಅತ್ಯುತ್ತಮ ಬೆಲೆ ಸಿಕ್ಕಿದೆ. ಈ ಬಾರಿ ಸಿಎಸ್‌ಆರ್2 ವಿ1 ಹಿಪ್ಪುನೇರಳೆ ತಳಿ ಬೆಳೆದಿರುವ ಅವರು, 350 ದ್ವಿತಳಿ ಸಂಕರಣ ಮೊಟ್ಟೆಗಳನ್ನು ಚಾಕಿ ವಾಡಿದ್ದರು. ಪ್ರತಿ 100 ಮೊಟ್ಟೆಗೆ ಸರಾಸರಿ 130.4 ಕೆಜಿಯಂತೆ ರೇಷ್ಮೆ ಗೂಡು ಉತ್ಪಾದನೆಯಾಗಿದೆ. ಗರಿಷ್ಠ 639 ರೂ. ಬೆಲೆ ಸಿಕ್ಕಿದೆ.
ಹುಳುಗಳನ್ನು ಅಟ್ಟ (ಶೆಲ್ಫ್) ವಿಧಾನದಲ್ಲಿ ಸಾಕಣೆ ವಾಡುವ ಇವರು ಹುಳುಗಳಿಗೆ ಸೊಪ್ಪು ಹಾಕಲು ಲಿಫ್ಟ್ ಮಾದರಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರೆ. ಕೊಠಡಿಯ ಒಳ ಮತ್ತು ಹೊರಗಡೆ ಸುತ್ತಲೂ ಹವಾಗುಣ ನಿಯಂತ್ರಣ ವ್ಯವಸ್ಥೆ ವಾಡಿಕೊಂಡಿದ್ದಾರೆ. ರೋಟರಿ ಚಂದ್ರಿಕೆಗಳನ್ನು ಬಳಸುವುದರಿಂದ ಗೂಡು ಉತ್ತಮ ಗುಣಮಟ್ಟದಲ್ಲಿದ್ದು, ಇಳುವರಿಯೂ ಹೆಚ್ಚಾಗಿದೆ.
ಉತ್ತಮ ರೇಷ್ಮೆ ಗೂಡು ಉತ್ಪಾದಿಸುವ ಇವರಿಗೆ 2017-18ನೇ ಸಾಲಿನಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ, ಜಿಲ್ಲಾ ಮಟ್ಟದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.
ಕೊಂಡ್ಲಹಳ್ಳಿಯ ರೈತ ಎಚ್.ಎನ್.ಮಂಜುನಾಥ್ ಅವರು ಉತ್ತಮ ರೀತಿಯಲ್ಲಿ ರೇಷ್ಮೆ ಗೂಡು ಉತ್ಪಾದನೆಯಲ್ಲಿ ತೊಡಗಿರುವುದು ಹೆಮ್ಮೆಯ ವಿಚಾರ. ಚಿತ್ರದುರ್ಗ ಜಿಲ್ಲೆಯ ಉತ್ತಮ ರೇಷ್ಮೆ ಬೆಳೆಗಾರರಲ್ಲಿ ಇವರು ಪ್ರಥಮ ಸಾಲಿನಲ್ಲಿ ನಿಲ್ಲುತ್ತಾರೆ. ಜೂನ್ 21ರಂದು ಇವರ ಗೂಡು ವಾರುಕಟ್ಟೆಯಲ್ಲಿ ಅತ್ಯಧಿಕ ಬೆಲೆಗೆ ಖರೀದಿಯಾಗಿದೆ ಎನ್ನುತ್ತಾರೆ ರಾಮನಗರ ರೇಷ್ಮೆ ಗೂಡು ವಾರುಕಟ್ಟೆ ಉಪ ನಿರ್ದೇಶಕ ಮಲ್ಲಿಕಾರ್ಜುನ್.
ಮೊಳಕಾಲ್ಮೂರು ತಾಲೂಕಿನಲ್ಲಿ 675 ಹೆಕ್ಟೇರ್‌ನಲ್ಲಿ ರೇಷ್ಮೆ ಬೆಳೆಯಲಾಗುತ್ತಿದೆ. ತಾಲೂಕಿನಲ್ಲಿ 560ಕ್ಕೂ ಹೆಚ್ಚು ಬೆಳೆಗಾರರಿದ್ದಾರೆ. ಕೊಂಡ್ಲಹಳ್ಳಿ ವ್ಯಾಪ್ತಿಯಲ್ಲಿ ರೋಟರಿ ಚಂದ್ರಿಕೆಗಳ ಬಳಕೆಯಿಂದ ಗುಣಮಟ್ಟದ ಗೂಡು, ಇಳುವರಿ ಹೆಚ್ಚಳಕ್ಕೆ ಕಾರಣ. ಕೊಂಡ್ಲಹಳ್ಳಿ, ಬಿ.ಜಿ.ಕೆರೆ ಭಾಗದ ರೇಷ್ಮೆ ಗೂಡಿಗೆ ವಾರುಕಟ್ಟೆಯಲ್ಲಿ ಅತ್ಯುತ್ತಮ ಬೆಲೆ ದೊರಕುತ್ತಿದೆ ಎನ್ನುತ್ತಾರೆ ತಾಲೂಕು ರೇಷ್ಮೆ ವಿಸ್ತರಣಾಧಿಕಾರಿ ಜಿ.ಬಿ.ಮಹೇಶ್.
ರೇಷ್ಮೆಗೂಡು ಉತ್ಪಾದನೆ ಮತ್ತು ಬೆಲೆಯಲ್ಲಿ ಏರಿಳಿತ ಸಾಮಾನ್ಯ. ಬೆಳೆ ನಷ್ಟ ಅನುಭವಿಸಿದವರನ್ನು ಸಂಕಷ್ಟದಿಂದ ಪಾರು ಮಾಡಲು ಸರ್ಕಾರ ಬೆಳೆಗಾರರಿಗೆ ಪ್ರೋತ್ಸಾಹಧನ ನೀಡಬೇಕು. ಆದರೆ, ಇಲಾಖೆಯಿಂದ ಯಾವುದೇ ಅನುಕೂಲ ಆಗುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ಸಿಬ್ಬಂದಿ ಕೊರತೆ ನೆಪ ಮುಂದಿಡುತ್ತಾರೆ.ಎಚ್.ಎನ್.ಮಂಜುನಾಥ್, ರೈತ