

ಶಿಡ್ಲಟ್ಟ : ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ವ್ಯವಸ್ಥಾಪಕ ನಿರ್ದೇಶಕಿ ಐಪಿಎಸ್ ಅಧಿಕಾರಿ ಡಿ.ರೂಪಾ ಅವರು ನಗರದ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಗೆ ಗುರುವಾರ ಭೇಟಿ ನೀಡಿ ಮಾರುಕಟ್ಟೆಯ ಆಡಳಿತ, ವಹಿವಾಟು, ಹಣ ಪಾವತಿ, ಹರಾಜು ರೀತಿನೀತಿಗಳ ಬಗ್ಗೆ ಮಾರುಕಟ್ಟೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು.
ಡಿ. ರೂಪಾ ಅವರಿಗೆ ಮಾರುಕಟ್ಟೆ ಅಧಿಕಾರಿಗಳು ರೇಷ್ಮೆಗೂಡಿನ ಇ&ಹರಾಜು, ಇ&ತೂಕ, ಇ&ಹಣ ಪಾವತಿ ಬಗ್ಗೆ ಮಾಹಿತಿ ನೀಡಿದರು.
ರೇಷ್ಮೆಗೂಡು ಮಾರುಕಟ್ಟೆಗೆ ಆವಕವಾಗುವ ರೇಷ್ಮೆಗೂಡಿನ ಪ್ರಮಾಣಕ್ಕೆ ತಕ್ಕಂತೆ ಜಾಲರಿಗಳನ್ನು ನೀಡಿ ಪ್ರತಿ ಲಾಟಿಗೂ ಸರಣಿ ಕ್ರಮಸಂಖ್ಯೆ ನೀಡಲಾಗುತ್ತದೆ. ಇ&ಹರಾಜು ಮೂಲಕ ರೀಲರುಗಳು ತಮಗೆ ಬೇಕಾದ ರೇಷ್ಮೆಗೂಡಿಗೆ ಬಿಡ್ ಮಾಡುತ್ತಾರೆ. ಹೆಚ್ಚಿನ ಬಿಡ್ ಮಾಡುವವರಿಗೆ ರೇಷ್ಮೆಗೂಡು ಸಿಗುತ್ತದೆ. ಒಂದೊಮ್ಮೆ ಬಿಡ್ನ ಬೆಲೆ ಸಮಾಧಾನ ತರದಿದ್ದಲ್ಲಿ ಬಿಡ್ ರದ್ದುಪಡಿಸುವ ಅವಕಾಶ ರೈತನಿಗೆ ಇರುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ಹರಾಜು ಪ್ರಕ್ರಿಯೆ ಮುಗಿದ ಮೇಲೆ ಎಲೆಕ್ಟ್ರಾನಿಕ್ ಯಂತ್ರಗಳಲ್ಲಿ ರೇಷ್ಮೆಗೂಡಿನ ನಿಖರ ತೂಕ ಮಾಡಲಾಗುತ್ತದೆ. ಹರಾಜು ಮುಗಿದ 24 ಗಂಟೆಗಳ ಒಳಗೆ ರೈತರ ಬ್ಯಾಂಕ್ ಖಾತೆಗೆ ಹಣ ಜಮೆ ಆಗಲಿದೆ ಎಂದು ವಿವರಿಸಿದರು.
ರೇಷ್ಮೆ ಜಂಟಿ ನಿರ್ದೇಶಕ ಎನ್.ಮಹದೇವಯ್ಯ, ರೇಷ್ಮೆ ಉಪನಿರ್ದೇಶಕ ಎನ್.ಉಮೇಶ್, ರೇಷ್ಮೆ ಸಹಾಯಕ ನಿದೇಶಕ ಕೆ.ತಿಮ್ಮರಾಜು, ರೇಷ್ಮೆ ವಿಸ್ತರಣಾಧಿಕಾರಿ ವಿ. ಶ್ರೀನಿವಾಸ್, ಸಿಲ್ಕ್ ರೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಅನ್ಸರ್ಖಾನ್, ರೀಲರ್ ಮುಖಂಡರಾದ ಫಾರೂಕ್ ಪಾಷಾ, ಜಿ.ರೆಹಮಾನ್, ಅನ್ವರ್, ಆನಂದಕುಮಾರ್, ಮುನಿಕೃಷ್ಣ ಮತ್ತಿತರರು ಹಾಜರಿದ್ದರು.
ಭರವಸೆ : ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕಿಯಾಗಿ ಇತ್ತೀಚೆಗಷ್ಟೆ ಅಧಿಕಾರ ವಹಿಸಿಕೊಂಡಿದ್ದೇನೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಅದಕ್ಕಾಗಿಯೇ ರಾಜ್ಯದಲ್ಲಿ ಪ್ರವಾಸ ಕೈಗೊಂಡಿದ್ದೇನೆ. ನಂತರ ನಿಗಮದ ಅಧಿಕಾರಿಗಳ ಸಭೆ ನಡೆಸಿ ಎಲ್ಲ ಮಾಹಿತಿ ಪಡೆಯುತ್ತೇನೆ. ನಂತರ ನಿಮ್ಮ ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಡಿ. ರೂಪಾ ತಿಳಿಸಿದರು.
ಎಂಡಿಗೆ ರೀಲರ್ಗಳ ಮನವಿ : ರೇಷ್ಮೆಗೂಡು ಮಾರುಕಟ್ಟೆಗೆ ಭೇಟಿ ನೀಡಿದ ಡಿ.ರೂಪಾ ಅವರನ್ನು ಭೇಟಿ ಮಾಡಿದ ರೀಲರುಗಳು ಅವರೊಂದಿಗೆ ಕೆಲ ಕಾಲ ಚರ್ಚಿಸಿದರು. ಕೆಲವೊಂದು ಬೇಡಿಕೆಗಳನ್ನು ಮುಂದಿಟ್ಟರು. ಕಳೆದ ಎರಡು ಮೂರು ದಿನಗಳ ಹಿಂದೆ ಪ್ರತಿ ಕೆಜಿ ರೇಷ್ಮೆನೂಲಿನ ಬೆಲೆಯಲ್ಲಿ 300&350 ರೂಪಾಯಿ ದಿಢೀರ್ ಕುಸಿದಿದೆ. ಇದರಿಂದ ಸಣ್ಣ ಮತ್ತು ಮಧ್ಯಮ ವರ್ಗದ ರೀಲರುಗಳಿಗೆ ನಷ್ಟವಾಗುತ್ತದೆ ಎಂದು ಗಮನ ಸೆಳೆದರು. ಬೆಲೆ ಕುಸಿದಾಗ ರೇಷ್ಮೆ ಮಾರಾಟ ಮಂಡಳಿಯೇ ನೇರವಾಗಿ ರೇಷ್ಮೆ ನೂಲನ್ನು ಖರೀದಿಸಬೇಕು, ರೀಲರುಗಳಿಂದ ರೇಷ್ಮೆ ನೂಲನ್ನು ಅಡ ಇಟ್ಟುಕೊಂಡು ಕಡಿಮೆ ಬಡ್ಡಿಗೆ ಸಾಲ ನೀಡಬೇಕು. ಇದಕ್ಕಾಗಿ ಹೆಚ್ಚಿನ ಅನುದಾನವನ್ನು ಮೀಸಲಿಡಬೇಕೆಂದು ರೀಲರುಗಳು ಮನವಿ ಮಾಡಿದರು.