ಡ್ರಗ್ಸ್ ಅಮಲಿನಲ್ಲಿ ತೇಲುತ್ತಿದೆ ಸಿಲಿಕಾನ್ ಸಿಟಿ: 6 ತಿಂಗಳಲ್ಲಿ 100 ವಿದೇಶಿ ಪೆಡ್ಲರ್​ಗಳ ಅರೆಸ್ಟ್, 2.5 ಟನ್ ಮಾದಕ ವಸ್ತು ವಶ

Drugs Smash
Published on

| ಅವಿನಾಶ ಮೂಡಂಬಿಕಾನ ಬೆಂಗಳೂರು

‘ಡ್ರಗ್ಸ್​ಯಾರ್ಡ್’ ಎಂದೇ ಕುಖ್ಯಾತಿ ಪಡೆದಿರುವ ಸಿಲಿಕಾನ್ ಸಿಟಿ ಅಮಲಿನಲ್ಲಿ ತೇಲುತ್ತಿದ್ದು, ಕಳೆದ 6 ತಿಂಗಳಿನಲ್ಲಿ ಬೆಂಗಳೂರು ನಗರದಲ್ಲಿ 100 ಮಂದಿ ವಿದೇಶಿ ಡ್ರಗ್ಸ್ ಪೆಡ್ಲರ್​ಗಳ ಕೈಗೆ ಕೋಳ ತೊಡಿಸಲಾಗಿದೆ. ರಾಜ್ಯ ರಾಜಧಾನಿಯೊಂದರಲ್ಲೇ ಬರೋಬ್ಬರಿ 2,545 ಕೆ.ಜಿ. ಡ್ರಗ್ಸ್ ಜಪ್ತಿಯಾಗಿರುವ ಸ್ಪೋಟಕ ಸಂಗತಿ ಹೊರಬಿದ್ದಿದೆ.

ಉದ್ಯಾನನಗರಿಯಲ್ಲಿ ನಡೆಯುತ್ತಿರುವ ಡ್ರಗ್ಸ್ ದಂಧೆಯಲ್ಲಿ ವಿದೇಶಿ ಪೆಡ್ಲರ್ಸ್​ಗಳ ಪಾಲು ಅಧಿಕವಾಗಿದ್ದು, ಕೇವಲ 6 ತಿಂಗಳಲ್ಲಿ 2,550 ಕೇಸ್​ಗಳು ದಾಖಲಾಗಿವೆ. ಒಟ್ಟು 3,171 ಮಂದಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಈ ಪೈಕಿ 100 ಮಂದಿ ವಿದೇಶಿ ಪೆಡ್ಲರ್​ಗಳಿದ್ದಾರೆ. 2019ರಲ್ಲಿ ಒಟ್ಟು 1,260 ಜನ ಬಂಧನಕ್ಕೊಳಗಾದರೆ, 2020ರಲ್ಲಿ ಇದರ ಪ್ರಮಾಣ 3,673ಕ್ಕೆ ಏರಿಕೆಯಾಗಿದೆ. ಈ ವರ್ಷ ಕರೊನಾ ಭೀತಿ ನಡುವೆಯೂ ಕೇವಲ ಆರೇ ತಿಂಗಳಲ್ಲಿ ಇದುವರೆಗೆ ಕೇಳರಿಯದಷ್ಟು ಡ್ರಗ್ಸ್ ಪ್ರಕರಣ

ರಾಜಧಾನಿಯಲ್ಲೇ ಶೇ.60 ದಂಧೆ: ನೈಜೀರಿಯಾ ಸೇರಿ ಆಫ್ರಿಕಾ ಖಂಡದ ಹಲವು ಪ್ರಜೆಗಳು ಹೆಣ್ಣೂರು, ಬಾಣಸವಾಡಿ, ಕೋರಮಂಗಲ, ಕೊತ್ತನೂರು, ರಾಮಮೂರ್ತಿನಗರ, ಯಲಹಂಕ, ಪುಟ್ಟೇನಹಳ್ಳಿ, ವೈಟ್​ಫೀಲ್ಡ್, ಮಾರತ್ತಹಳ್ಳಿ, ಬೆಳ್ಳಂದೂರು ಭಾಗದಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದು, ಡ್ರಗ್ಸ್ ಮಾರಾಟವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಮಾದಕ ವಸ್ತು ದಂಧೆಯ ಪೈಕಿ ಬೆಂಗಳೂರಿನ ಪಾಲು ಶೇ.60 ಇದೆ. ನೈಜೀರಿಯಾ, ಉಗಾಂಡ, ಕೀನ್ಯಾ, ಘಾನಾ, ಸುಡಾನ್, ಲಿಬಿಯಾ ಸೇರಿ ಆಫ್ರಿಕಾ ಮೂಲದ ಪ್ರಜೆಗಳು ಪ್ರವಾಸಿ, ವ್ಯಾಸಂಗ, ಉದ್ಯಮದ ಹೆಸರಿನಲ್ಲಿ ವೀಸಾ ಪಡೆದು ನಗರಕ್ಕೆ ಕಾಲಿಡುತ್ತಿದ್ದು, ನಂತರ ಇಲ್ಲೇ ಠಿಕಾಣಿ ಹೂಡಿ ದಂಧೆಯಲ್ಲಿ ಸಕ್ರಿಯವಾಗಿದ್ದಾರೆ. ಉತ್ತರ ಭಾರತದ ಕೆಲ ರಾಜ್ಯಗಳಲ್ಲಿರುವ ಪೆಡ್ಲರ್​ಗಳನ್ನು ಸಂರ್ಪಸಿ ಕಡಿಮೆ ಬೆಲೆಗೆ ಅವರಿಂದ ಡ್ರಗ್ಸ್ ಖರೀದಿಸಿ ಟೆಕ್ಕಿಗಳು, ಕಾಲೇಜು ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ಮಾರಾಟ ಮಾಡಿ ತಿಂಗಳಿಗೆ ಲಕ್ಷ ಲಕ್ಷ ರೂ. ಅಕ್ರಮವಾಗಿ ಸಂಪಾದಿಸುತ್ತಿದ್ದಾರೆ. ಹೆಚ್ಚಾಗಿ ಎಲ್​ಎಸ್​ಡಿ, ಹಶಿಷ್, ಕೊಕೇನ್, ಬ್ರೌನ್​ಶುಗರ್​ನಂತಹ ಬೆಲೆಬಾಳುವ ಮಾದಕ ದ್ರವ್ಯಗಳನ್ನು ಗ್ರಾಹಕರು ಇವರಿಂದಲೇ ಖರೀದಿಸುತ್ತಾರೆ.

ಪೆಡ್ಲರ್​ಗಳ ಮೇಲೆ ಸದಾ ನಿಗಾ ಇಡಲಾಗುತ್ತಿದೆ. ಅಕ್ರಮವಾಗಿ ನೆಲೆಸಿರುವ ವಿದೇಶಿ ಡ್ರಗ್ಸ್ ದಂಧೆಕೋರರನ್ನು ಬಂಧಿಸಿ ಗಡಿಪಾರು ಕ್ರಮ ಕೈಗೊಳ್ಳಲಾಗಿದೆ. ಡಾರ್ಕ್​ವೆಬ್ ಮೂಲಕ ವಿದೇಶಗಳಿಂದ ಆಮದಾಗುತ್ತಿರುವ ಡ್ರಗ್ಸ್​ಗೆ ಕಡಿವಾಣ ಹಾಕಲಾಗುತ್ತಿದೆ. | ಕಮಲ್ ಪಂತ್ ನಗರ ಪೊಲೀಸ್ ಆಯುಕ್ತ

ಮಾದಕ ವ್ಯಸನಿಗಳಾಗಿರುವ ರೌಡಿಗಳು

ಬೆಂಗಳೂರು: ಆಗ್ನೇಯ ಹಾಗೂ ಪಶ್ಚಿಮ ವಿಭಾಗದ ಪೊಲೀಸರು ಶನಿವಾರ ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿದ ವೇಳೆ ಹಲವು ರೌಡಿಗಳು ಮಾದಕವಸ್ತು ಸೇವಿಸಿರುವುದು ಕಂಡುಬಂದಿದೆ. ಶಂಕೆ ಮೇರೆಗೆ 33 ರೌಡಿಗಳಿಗೆ ಮೆಡಿಕಲ್ ಟೆಸ್ಟ್ ಮಾಡಲಾಗಿದೆ. ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿರುವ ಪ್ರಕರಣದಲ್ಲಿ ಬ್ಯಾಟರಾಯನಪುರ ಹಾಗೂ ಚಾಮರಾಜಪೇಟೆ ಠಾಣೆಗಳಲ್ಲಿ ಪ್ರತ್ಯೇಕ 2 ಎಫ್​ಐಆರ್ ದಾಖಲಿಸಿಕೊಳ್ಳಲಾಗಿದೆ. ಮಾರಕಾಸ್ತ್ರ ಹೊಂದಿದ್ದ ಮೊಮೀನ್ ಪಾಷಾ, ಬೋಂಡ ಅನ್ವರ್ ಪಾಷಾನನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ. ಕೌಶಿಕ್, ವೀರಾ, ಜೈಕಾರ್, ರಾಜು, ಕಾರ್ತಿಕ್ ಎಂಬುವರನ್ನು ಬ್ಯಾಟರಾಯನಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರೌಡಿಗಳಿಗೆ ಎಚ್ಚರಿಕೆ: ರೌಡಿಗಳ ಇನ್ನಿತರ ಚಟುವಟಿಕೆಗಳ ಬಗ್ಗೆ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net