

ತುಮಕೂರು: ರಾಜ್ಯದಾದ್ಯಂತ 1426 ಕಿ.ಮೀ., ರೈಲು ಮಾರ್ಗವನ್ನು ಸಿಗ್ನಲ್ರಹಿತ (ಸ್ವಯಂಚಾಲಿತ) ಮಾರ್ಗವನ್ನಾಗಿ ಪರಿವರ್ತಿಸಲಾಗುವುದು ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ನಗರದ ಗ್ರಂಥಾಲಯ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ರೈಲ್ವೇ ಪ್ರಯಾಣಿಕರ ವೇದಿಕೆಯ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತುಮಕೂರು&-ಅರಸೀಕೆರೆ ಮಾರ್ಗದಲ್ಲಿ 220 ಕೋಟಿ ರೂ.,ಗಳ ವೆಚ್ಚದಲ್ಲಿ ಆಟೋಮ್ಯಾಟಿಕ್ ಸಿಗ್ನಲ್ ಲೈನ್ ಅಳವಡಿಕೆಗೆ ಯೋಜನೆ ರೂಪಿಸಲಾಗಿದೆ. ಅದೇ ರೀತಿ ರಾಜ್ಯದಲ್ಲಿ ಸಿಗ್ನಲ್ ರಹಿತ ರೈಲು ಮಾರ್ಗಗಳನ್ನು ರೂಪಿಸಲಾಗುವುದು ಎಂದರು.
ರೈಲ್ವೆ ಇಲಾಖೆಯಲ್ಲಿ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗಳಿಗೆ ವೇಗ ನೀಡಲು ಪ್ರಧಾನಿ ಮೋದಿ ಅವರು ಅನುದಾನವನ್ನು ನೀಡಿದ್ದಾರೆ. ಭೂಸ್ವಾಧಿನ ಪ್ರಕ್ರಿಯೆ ಮುಗಿಯದೆ ವಿಳಂಬವಾಗಿದ್ದ ತುಮಕೂರು&-ರಾಯದುರ್ಗ, ತುಮಕೂರು&ಚಿತ್ರದುರ್ಗ&-ದಾವಣಗೆರೆ ರೈಲ್ವೆ ಯೋಜನೆಗಳಿಗೆ ವೇಗ ನೀಡಲಾಗಿದ್ದು ಭೂಸ್ವಾಧಿನ ಪ್ರಕ್ರಿಯೆ ಕಾರ್ಯ ಬಹುತೇಕ ಅಂತಿಮ ಹಂತದಲ್ಲಿದೆ. 2027ರ ಹೊತ್ತಿಗೆ ಈ ರೈಲು ಯೋಜನೆಗಳನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.
ತುಮಕೂರು ನಗರದ ರೈಲ್ವೆ ನಿಲ್ದಾಣವನ್ನು 88 ಕೋಟಿ ರೂ., ವೆಚ್ಚದಲ್ಲಿ ಸುಸಜ್ಜಿತವಾಗಿ ನಿಮಾರ್ಣ ಮಾಡುವ ಯೋಜನೆಗೆ ಹಸಿರುನಿಶಾನೆ ಸಿಕ್ಕಿದೆ. ಸಿದ್ದಗಂಗಾ ಮಠದ ಮಾದರಿಯಲ್ಲಿ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು ಇದಕ್ಕೆ ತ್ರಿವಿಧ ದಾಸೋಹಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ ಹೆಸರನ್ನು ನಾಮಕರಣ ಮಾಡಲಾಗುವುದು. ಇಷ್ಟೆಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಿದ್ದು ನಿಮ್ಮ ಆಶೀರ್ವಾದ, ನೀವು ಮತ ನೀಡಿ ಕೊಟ್ಟ ಅವಕಾಶ ಎಂದರು.
ರೈಲ್ವೆ ಇಲಾಖೆಯಲ್ಲಿ ಸಾವಿರಾರು ಉದ್ಯೋಗಾವಕಾಶಗಳಿವೆ. ಈವರೆಗೆ ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ನೇಮಕಾತಿ ಪರೀಕ್ಷೆಗಳನ್ನು ಬರೆಯಲು ಮಾತ್ರ ಅವಕಾಶವಿತ್ತು. ಈಗ ಕನ್ನಡದಲ್ಲೂ ಪರೀಕ್ಷೆ ಬರೆದು ಕನ್ನಡಿಗರು ರೈಲ್ವೆ ಇಲಾಖೆಯ ವಿವಿಧ ಹಂತದ ಹುದ್ದೆಗಳನ್ನು ಪಡೆಯಬಹುದು. ಇದು ಮಹತ್ವದ ಬದಲಾವಣೆ ಅಲ್ಲವೇ. ರೈಲ್ವೆ ಗೇಟುಗಳನ್ನು ತೆರವು ಮಾಡಿ ಆ ಭಾಗದಲ್ಲಿ ಮೇಲ್ಸೇತುವೆ, ಕೆಳಸೇತುವೆ ನಿಮಾರ್ಣ ಮಾಡುವ ಕಾರ್ಯಕ್ಕೆ ಆದ್ಯತೆ ನೀಡಲಾಗಿದ್ದು ಪ್ರಯಾಣಿಕರ ಸುರಕ್ಷತೆ ಹಾಗೂ ಅನುಕೂಲಕ್ಕಾಗಿ ಇಲಾಖೆಯಲ್ಲಿ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಸೋಮಣ್ಣ ಭರವಸೆಯಿತ್ತರು.
ಜಿಲ್ಲಾ ರೈಲ್ವೇ ಪ್ರಯಾಣಿಕರ ವೇದಿಕೆ ವತಿಯಿಂದ ಜಿಲ್ಲೆಯ ರೈಲ್ವೆ ಅಭಿವೃದ್ಧಿಯ ಮುನ್ನೋಟದ ಕಿರು ಹೊತ್ತಿಗೆ ಹಾಗೂ ನಮ್ಮ ರೈಲು ಎಂಬ ಸ್ಮರಣ ಸಂಚಿಕೆಯನ್ನು ಸಚಿವ ಸೋಮಣ್ಣ ಇದೇ ವೇಳೆ ಬಿಡಗಡೆಗೊಳಿಸಿದರು.ವೇದಿಕೆಯ ಪ್ರಧಾನ ಕಾರ್ಯದರ್ಶಿ ಕರಣಂ ರಮೇಶ್ ರಚಿಸಿ ನಿರ್ದೇಶನ ಮಾಡಿದ ರೈಲು ಕುರಿತ ಸಾಕ್ಷಚಿತ್ರವನ್ನು ಶಾಸಕ ಜಿ.ಬಿ.ಜ್ಯೋತಿಗಣೇಶ್ ಅನಾವರಣಗೊಳಿಸಿದರು.
ಪ್ರತಿಭಾಪುರಸ್ಕಾರ: ಎಸ್ಸೆಸ್ಸೆಲ್ಸಿ, ದ್ವೀತಿಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ರೈಲ್ವೇ ಪ್ರಯಾಣಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ವೇದಿಕೆಯ ದಶಮಾನೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ರೈಲು ಮತ್ತು ರೈಲಿನ ಸುರಕ್ಷತೆ ವಿಷಯದ ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಯಿತು. ಮಾಜಿ ಸಂಸದ ಜಿ.ಎಸ್.ಬಸವರಾಜುರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್, ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಹಾಲಪ್ಪ ಪ್ರತಿಷ್ಠಾನ ಅಧ್ಯಕ್ಷ ಮುರಳಿಧರ ಹಾಲಪ್ಪ, ಜಿಪಂ ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ಬಿಜೆಪಿ ಮುಖಂಡ ಎಸ್.ಶಿವಪ್ರಸಾದ್ ಉಪಸ್ಥಿತರಿದ್ದರು. ದಶಮಾನೋತ್ಸವ ಸಮಿತಿ ಅಧ್ಯಕ್ಷ ಬಿ.ಕೆ.ಜಯಪ್ರಕಾಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರೈಲ್ವೇ ಪ್ರಯಾಣಿಕರ ವೇದಿಕೆ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಪ್ರಧಾನ ಕಾರ್ಯದರ್ಶಿ ಕರಣಂ ರಮೇಶ್, ಉಪಾಧ್ಯಕ್ಷರಾದ ಪರಮೇಶ್ ಸಿಂದಗಿ ಬಿ.ಆರ್., ಮಾಧವಮೂರ್ತಿ ಗುಡಿಬಂಡೆ, ಜಂಟಿ ಕಾರ್ಯದರ್ಶಿಗಳಾದ ಸಗರ ಚಕ್ರವರ್ತಿ, ಎಂ.ಆರ್.ರಘು, ಖಜಾಂಚಿ ಆರ್.ಬಾಲಾಜಿ ಮತ್ತಿತರರು ಉಪಸ್ಥಿತರಿದ್ದರು.
6&7 ತಿಂಗಳಲ್ಲಿ ಜಿಲ್ಲೆಗೆ ದೊಡ್ಡ ಕೊಡುಗೆ !
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಯೋಜನೆಗಳು, ದೂರದೃಷ್ಟಿಯ ಚಿಂತನೆ ದೇಶದ ಪ್ರಗತಿಗೆ ಸಹಕಾರಿಯಾಗಿದೆ. ಇನ್ನು 6-&7 ತಿಂಗಳಲ್ಲಿ ಪ್ರಧಾನಿ ಮೋದಿ ಅವರೇ ತುಮಕೂರು ಜಿಲ್ಲೆಗೆ ದೊಡ್ಡ ಯೋಜನೆಯನ್ನು ಘೋಷಣೆ ಮಾಡಲಿದ್ದಾರೆ. ಆ ಯೋಜನೆ ಯಾವುದೆಂದು ನಾನು ಈಗ ಹೇಳುವುದಿಲ್ಲ, ಕಾದು ನೋಡಿ ಎಂದು ಸಚಿವ ಸೋಮಣ್ಣ ಕುತೂಹಲ ಮೂಡಿಸಿದರು.