

ಶಿವಮೊಗ್ಗ: ಸಿಗಂದೂರು ದೇವಸ್ಥಾನದ ಆಡಳಿತದ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿರುವುದನ್ನು ವಿರೋಧಿಸಿ ಹಾಗೂ ಮೇಲುಸ್ತುವಾರಿ ಮತ್ತು ಸಲಹಾ ಸಮಿತಿ ರದ್ದತಿಗೆ ಆಗ್ರಹಿಸಿ ಹೋರಾಟದ ಪೂರ್ವ ಸಿದ್ಧತಾ ಸಭೆಯನ್ನು ನ.9ರಂದು ಮಧ್ಯಾಹ್ನ 3ಕ್ಕೆ ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗರ ಭವನದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಈಡಿಗರ ಸಂಘದ ಜಿಲ್ಲಾಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್ ತಿಳಿಸಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್, ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಶಾರದಾ ಪೂರ್ಯನಾಯ್ಕ್, ಮುಖಂಡರಾದ ಆರ್.ಎಂ.ಮಂಜುನಾಥ ಗೌಡ, ಎಸ್.ಶ್ರೀಕಾಂತ್, ಈಡಿಗರ ಸಂಘದ ರಾಜ್ಯಾಧ್ಯಕ್ಷ ತಿಮ್ಮೇಗೌಡ ಮತ್ತಿತರರು ಸಭೆಗೆ ಆಗಮಿಸುವರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳ ಸಮಾಜದ ಮುಖಂಡರು ಒಳಗೊಂಡಂತೆ ಎಲ್ಲ ಸಮಾಜದ ಮುಖಂಡರಿಗೆ ಆಹ್ವಾನ ನೀಡಲಾಗಿದೆ. ಸಭೆಯಲ್ಲಿ ಹೋರಾಟದ ಮುಂದಿನ ರೂಪುರೇಷೆಗಳ ಬಗ್ಗೆ ಚರ್ಚಿಸಲಾಗುವುದು. ಸರ್ಕಾರಕ್ಕೆ ಈಗಾಗಲೇ ಹಲವು ಬಾರಿ ಮನವಿ, ಪ್ರತಿಭಟನೆಗಳನ್ನು ನಡೆಸುವ ಮೂಲಕ ಎಚ್ಚರಿಕೆ ನೀಡಲಾಗಿದೆ. ಸಚಿವ ಕೆ.ಎಸ್.ಈಶ್ವರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೂ ಮನವರಿಕೆ ಮಾಡಿಕೊಡಲಾಗಿದೆ. ಆದರೂ ಸರ್ಕಾರ ಸಮಿತಿ ರದ್ದುಪಡಿಸುವ ಬಗ್ಗೆ ಯಾವುದೇ ನಿರ್ಧಾರ ಸ್ಪಷ್ಟಪಡಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾಜದ ಮುಖಂಡರಾದ ಭುಜಂಗಯ್ಯ, ಕಾಗೋಡು ರಾಮಪ್ಪ, ಲಕ್ಷ್ಮೀಕಾಂತ್, ಉಮೇಶ್, ಗೀತಾಂಜಲಿ ದತ್ತಾತ್ರಿ, ವೀಣಾ ವೆಂಕಟೇಶ್, ಕವಿತಾ ಅಣ್ಣಪ್ಪ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.