ಸಿಗಂದೂರು ದೇವಾಲಯದ ಮೇಲ್ವಿಚಾರಣೆ ಸಮಿತಿ ಪುನರ್ ಪರಿಶೀಲಿಸಲು ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟ ಮನವಿ

sigandhur issue swamiji's given memorandum to cm
Published on

ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಮೇಲ್ವಿಚಾರಣೆ ಸಮಿತಿ ರಚಿಸಿರುವುದನ್ನು ಸರ್ಕಾರ ಪುನರ್ ಪರಿಶೀಲಿಸಬೇಕು ಎಂದು ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟ ಮನವಿ ಮಾಡಿದೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಶ್ರೀ ನಾರಾಯಣ ಗುರು ಮಹಾ ಸಂಸ್ಥಾನದ ಪೀಠಾಧ್ಯಕ್ಷ ರೇಣುಕಾನಂದ ಸ್ವಾಮೀಜಿ ನೇತೃತ್ವದಲ್ಲಿ ಒಕ್ಕೂಟದ ನಿಯೋಗ ಭೇಟಿ ಮಾಡಿ ಶನಿವಾರ ಮನವಿ ಸಲ್ಲಿಸಿತು.

ದೇವಸ್ಥಾನಕ್ಕೆ ಅಪಾರ ಪ್ರಮಾಣದ ಭಕ್ತರು, ಹಿಂದುಳಿದ, ದಲಿತ ವರ್ಗಗಳ ಸಮುದಾಯ ಸೇವಾ ನಿಷ್ಠರು ಇದ್ದಾರೆ. ಈಡಿಗ ಸಮುದಾಯದ ಡಾ.ರಾಮಪ್ಪ ನೇತೃತ್ವದ ಧರ್ಮದರ್ಶಿ ಮಂಡಳಿ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಮೂಲಕ ದೇವಸ್ಥಾನದ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ.

ಸಣ್ಣಪುಟ್ಟ ಲೋಪದೋಷಗಳಿದ್ದರೆ ಸರಿಪಡಿಸಿಕೊಳ್ಳಲು ಹಾಗೂ ಎಂದಿನಂತೆ ಈ ಟ್ರಸ್ಟ್ ಗೆ ಧಾರ್ಮಿಕ, ಸಾಮಾಜಿಕ ಕಾರ್ಯಗಳ ನಿರ್ವಹಣೆ ಜವಾಬ್ದಾರಿ ನೀಡಿ, ಜಿಲ್ಲಾಧಿಕಾರಿ ರಚಿಸಿದ ಮೇಲ್ವಿಚಾರಣೆ ಸಮಿತಿಯನ್ನು ಕೈಬಿಡಬೇಕು ಎಂದು ಕೋರಿದ್ದು, ವಸ್ತುಸ್ಥಿತಿ ಮಾಹಿತಿ ತರಿಸಿಕೊಂಡು ಸೂಕ್ತ ಕ್ರಮವಹಿಸುವುದಾಗಿ ಬಿಎಸ್ ವೈ ಭರವಸೆ ನೀಡಿದ್ದಾರೆ.

ನಿಯೋಗದಲ್ಲಿ ಒಕ್ಕೂಟದ ಮಠಾಧೀಶರಾದ ಮಧುರೆ ಹೊಸದುರ್ಗ ಭಗೀರಥ ಪೀಠಾಧಿಪತಿ ಪುರುಷೋತ್ತಮಾನಂದ ಪುರಿ ಸ್ವಾಮಿ, ಹೊಸದುರ್ಗ ಕನಕಗುರು ಪೀಠದ ಈಶ್ವರಾನಂದ ಪುರಿ ಸ್ವಾಮಿ, ಕುಂಚಿಟಿಗ ಮಹಾ ಸಂಸ್ಥಾನದ ಶಾಂತವೀರ ಸ್ವಾಮೀಜಿ ಇನ್ನಿತರ ಮಠಾಧೀಶರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net